Wednesday, March 25, 2026
Homeಕ್ರೈಮ್ಚಿಕ್ಕಮಗಳೂರು: ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ತಿದ್ದುಪಡಿ ಮಸೂದೆ ಹಿಂತೆಗೆದುಕೊಳ್ಳುವಂತೆ ಒತ್ತಾಯ

ಚಿಕ್ಕಮಗಳೂರು: ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ತಿದ್ದುಪಡಿ ಮಸೂದೆ ಹಿಂತೆಗೆದುಕೊಳ್ಳುವಂತೆ ಒತ್ತಾಯ

ಚಿಕ್ಕಮಗಳೂರು: ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು (ಹಕ್ಕುಗಳ ರಕ್ಷಣೆಯ) ತಿದ್ದುಪಡಿ ಮಸೂದೆ 2026ನ್ನು ಹಿಂತೆಗೆದುಕೊಳ್ಳುವಂತೆ ಕ್ವೀರ್ ಹಕ್ಕುಗಳ ಸಂಸ್ಥೆ, ಲೈಂಗಿಕ ಕಾರ್ಮಿಕರು, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಒಕ್ಕೂಟದ ಮುಖಂಡ ಮೇಘ ಮಲ್ನಾಡ್ ಒತ್ತಾಯಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಿಂಗತ್ವ ಗುರುತಿನ ಸ್ವಯಂ ನಿರ್ಧಾರ ಹಕ್ಕನ್ನು ಉಳಿಸಬೇಕು. ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಪ್ರತಿ ರಾಜ್ಯದಲ್ಲೂ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳು ಮತ್ತು ಅವರ ಸಂಘಟನೆಗಳೊಂದಿಗೆ ಸಕ್ರೀಯ ಹಾಗೂ ಅರ್ಥಪೂರ್ಣ ಸಮಾಲೋಚನೆ ನಡೆಸಬೇಕು ಎಂದರು.

ಕಾನೂನುಗಳನ್ನು ಸಂವಿಧಾನದ ಭರವಸೆಗಳು ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳಿಗೆ ಹೊಂದಾಣಿಕೆಯಾಗುವಂತೆ ಮಾಡಬೇಕು. ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಗೌರವ, ಸ್ವಾಯತ್ತತೆ ಮತ್ತು ಸಮಾನ ನಾಗರಿಕತ್ವವನ್ನು ರಕ್ಷಿಸಬೇಕು ಎಂದು ಹೇಳಿದರು.

ಟ್ರಾನ್ಸ್‌ಜೆಂಡರ್ ಎಂಬ ಕಾನೂನು ವ್ಯಾಖ್ಯಾನದಿಂದ ಸ್ವಯಂ ಗುರುತಿಸಿಕೊಳ್ಳುವ ಹಕ್ಕನ್ನು ತೆಗೆದು ಹಾಕುವುದರಿಂದ ಮೂಲಭೂತ ಹಕ್ಕುಗಳು, ಕಾನೂನು ಮಾನ್ಯತೆ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಪ್ರವೇಶ ಪಡೆಯುವಲ್ಲಿ ದೊಡ್ಡ ಅಡೆತಡೆಗಳು ಸೃಷ್ಟಿಯಾಗುತ್ತವೆ ಎಂದು ತಿಳಿಸಿದರು.


ಹಕ್ಕುಗಳ ರಕ್ಷಣೆಯ ತಿದ್ದುಪಡಿ ಅಲ್ಪಸಂಖ್ಯಾತ ಸಮುದಾಯಗಳೊಂದಿಗೆ ಯಾವುದೇ ಸಮಾಲೋಚನೆ ಇಲ್ಲದೆ ರೂಪಿಸಲಾಗಿದೆ. ಲಿಂಗ, ಲಿಂಗತ್ವ ಮತ್ತು ಲೈಂಗಿಕತೆ ನಡುವಿನ ವ್ಯತ್ಯಾಸದ ಬಗ್ಗೆ ಅಪೂರ್ಣ ಅರಿವು ಇದರಲ್ಲಿ ಗೋಚರಿಸುತ್ತದೆ. ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಜೀವನದಲ್ಲಿ ಅತಿಕ್ರಮಣ, ದಮನ ಮತ್ತು ಬೇಧ ಭಾವ ಹೇಗೆ ಪರಸ್ಪರ ಸಂಬಂಧ ಹೊಂದಿವೆ ಎಂಬುದರ ಕುರಿತು ತಪ್ಪುಕಲ್ಪನೆಗಳನ್ನು ಇದು ಪ್ರತಿಬಿಂಬಿಸುತ್ತದೆ ಎಂದರು.


ನ್ಯಾಯಾಂಗ ತೀರ್ಪುಗಳು, ಸಮುದಾಯ ಚಳುವಳಿಗಳು ಮತ್ತು ಪ್ರಗತಿಪರ ನೀತಿಗಳ ಮೂಲಕ ಭಾರತ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಹಕ್ಕುಗಳನ್ನು ಗುರುತಿಸುವಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ. ಹೊಸ ಕಾನೂನುಗಳು ಈ ಸಾಧನೆಗಳನ್ನು ದುರ್ಬಲಗೊಳಿಸುವ ಬದಲು ಅವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಂಘಟನೆ ಮುಖಂಡರಾದ ಪ್ರೀತಂ, ಪಾತಿಮತ್ ನಾಜಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!