ಚಿಕ್ಕಮಗಳೂರು : ಶೃಂಗೇರಿ ಕ್ಷೇತ್ರ, ಮೂಡಿಗೆರೆ ಸಹಿತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚೆಗೆ 5 ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ. ಕಳೆದ ಒಂದು ವಾರದಲ್ಲಿ ಬನ್ನೂರಿನ ಅನಿತಾ, ಜಾಗ್ರದ ಸುಬ್ಬೇಗೌಡ ಸೇರಿದಂತೆ ದಿನನಿತ್ಯ ಮಾನವ ಪ್ರಾಣಿ ಸಂಘರ್ಷದಿಂದ ಜನ ಜೀವನಕ್ಕೆ ಬೆದರಿಕೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ಲೋಕಸಭಾ ಕ್ಷೇತ್ರವಾದ ಚಿಕ್ಕಮಗಳೂರಿನಲ್ಲಿ ಕಾಡುಪ್ರಾಣಿಗಳ ಅದರಲ್ಲೂ ಆನೆದಾಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ರವರನ್ನು ಭೇಟಿ ಮಾಡಿ ಖುದ್ದು ಮನವಿ ಸಲ್ಲಿಸಿದರು.

ಆನೆಗಳ ಸಂತತಿ ವೇಗವಾಗಿ ಬೆಳೆಯುತ್ತಿದ್ದು, ಕಾಡಾನೆಗಳು ರೈತಾಪಿ ವರ್ಗದ ಬೆಳೆ ಮಾತ್ರವಲ್ಲ, ಕೃಷಿ ಕಾರ್ಯದಲ್ಲಿ ನಿರತರಾದ ರೈತರ ಹತ್ಯೆ ಮಾಡುತ್ತಿವೆ.ಇಂತಹ ಸಂಕಷ್ಟ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸರಕಾರಗಳು ಒಟ್ಟಾಗಿ ಆನೆಗಳ ನಿಯಂತ್ರಣ ಮತ್ತು ಆನೆ ದೊಡ್ಡಿಗಳ ನಿರ್ಮಾಣದ ಶಾಶ್ವತ ಪರಿಹಾರದ ಯೋಜನೆ ರೂಪಿಸಬೇಕೆಂದು ಮನವಿಯಲ್ಲಿ ಕೋಟ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯವರಿಗೆ ಸಲಹೆ ನೀಡಿ ಸೂಕ್ತ ವರದಿ ಪಡೆದು ಜಂಟಿ ಕಾರ್ಯಯೋಜನೆ ತಯಾರಿಸಿ, ಕಾಡಾನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಕಾರ್ಯಯೋಜನೆ ರೂಪಿಸಬೇಕೆಂದು ಮನವಿ ಮಾಡಿದ್ದಾರೆ.
ವರದಿ: ಶಶಿ ಬೆತ್ತದಕೊಳಲು