ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಾಡಾನೆಗಳ ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಚಿಕ್ಕಮಗಳೂರು ತಾಲೂಕಿನ ಒಟ್ಟು 12 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸಂಜೆ 4 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕರ ಸಂಚಾರವನ್ನು ನಿಯಂತ್ರಿಸಲಾಗಿದೆ. ಈ ಸಂಬಂಧ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
ಹೌದು .. ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ, ವಸ್ತಾರೆ, ಮತ್ತಾವರ, ದಂಬದಹಳ್ಳಿ, ನಲ್ಲೂರು, ಕಾರೇಮನೆ, ಉಕ್ಕುಂದ, ಗಡಬನಹಳ್ಳಿ, ಜೋಳದಾಳು, ಚಿಕ್ಕೊಳಲೆ, ತಳಿಹಳ್ಳ, ಶಿರಗುಂದದಲ್ಲಿ ಜನರ ಸುರಕ್ಷತೆಗಾಗಿ ನಿಷೇಧಾಜ್ಞೆ ಹೊರಡಿಸಲಾಗಿದೆ. ವಿಶೇಷವಾಗಿ ಚಿಕ್ಕೊಳಲೆ ಅರಣ್ಯ ಪ್ರದೇಶದಲ್ಲಿ ಎರಡು ಕಾಡಾನೆಗಳು ಬೀಡುಬಿಟ್ಟಿರುವುದು ಪತ್ತೆಯಾಗಿದ್ದು, ಅವುಗಳ ಚಲನವಲನಗಳ ಮೇಲೆ ಅರಣ್ಯ ಇಲಾಖೆ ಕಣ್ಣಿಟ್ಟಿದೆ ಎಂದು ಹೇಳಬಹುದು.
ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳುವವರು ತಾತ್ಕಾಲಿಕವಾಗಿ ತಡೆಯಬೇಕೆಂದು ಸೂಚಿಸಲಾಗಿದೆ. ರಾತ್ರಿ ವೇಳೆ ಮನೆಗಳ ಹೊರಗೆ ಓಡಾಡದಂತೆ ಹಾಗೂ ಗುಂಪುಗಳಲ್ಲಿ ಮಾತ್ರ ಸಂಚರಿಸುವಂತೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿ ಉಂಟಾದಲ್ಲಿ ತಕ್ಷಣ ಅರಣ್ಯ ಇಲಾಖೆ ಅಥವಾ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ಇದೀಗ ಬಾಳೆಹೊನ್ನೂರು ಸುತ್ತಮುತ್ತು ಆನೆ ಪ್ರತ್ಯಕ್ಷವಾಗಿರುವುದು ಜನರಲ್ಲಿ ಭೀತಿ ಹುಟ್ಟಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಸುತ್ತಮುತ್ತ ನಿರಂತರವಾಗಿ ಕಾಡಾನೆ ಕಾಣಿಸಿಕೊಳ್ಳುತ್ತಿದ್ದು, ಇದೀಗ ಹುಯಿಗೆರೆ – ಅಂಡವಾನೆ ರಸ್ತೆಯಲ್ಲಿ ಕಂಡುಬಂದಿದೆ. ಒಂಟಿ ಸಲಗ ರಸ್ತೆ ದಾಟುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಕೆಲ ದಿನಗಳ ಹಿಂದಷ್ಟೇ ತಾಲ್ಲೂಕಿನ ಹುಣಸೆಹಳ್ಳಿ ಗ್ರಾಮದಲ್ಲಿ ನಾಗೇಶ್ ಗೌಡ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 50 ವರ್ಷದ ಕಾರ್ಮಿಕ ಯಲ್ಲಪ್ಪ ಆನೆ ದಾಳಿಗೆ ಬಲಿಯಾಗಿದ್ದರು. ಈ ಘಟನೆ ನಡೆದು ಒಂದು ವಾರದಲ್ಲೇ ಅದೇ ಕಾಫಿತೋಟದಲ್ಲಿ ಕಾಡಾನೆ ದಾಳಿಗೆ ಹೊಸಪೇಟೆ ಮೂಲದ ಬೋರಮ್ಮ (34)ಎಂಬ ಕಾರ್ಮಿಕ ಮಹಿಳೆಯೂ ಅಸುನೀಗಿದ್ದರು. ಈ ಘಟನೆಗಳ ಬಳಿಕ ವೇಗದಿಂದ ಸಾಗಿದ ಆನೆ ಸೆರೆ ಕಾರ್ಯಾಚರಣೆಯು ಯಶಸ್ವಿಗೊಂಡು ಕಿಲ್ಲರ್ ಸಲಗ ಸೆರೆಯಾಗಿತ್ತು. ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದೆ.
