ಚಿಕ್ಕಮಗಳೂರು: ಮಡಿಕೇರಿಯಲ್ಲಿ ಪ್ರವಾಸಿ ಮಹಿಳೆ ನಾಪತ್ತೆಯಾದ ಬೆನ್ನಲ್ಲೇ ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಇಂತಹದೇ ಒಂದು ಆತಂಕಕಾರಿ ಘಟನೆ ನಡೆದಿದೆ.

ಹೌದು .. ಕೇರಳದ ಪಾಲಕ್ಕಾಡ್ ಮೂಲದ ನಂದನಾ ಎಂಬ ಯುವತಿಯು ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರ ಜಲಪಾತದ ಬಳಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಕೇರಳದಿಂದ ಸುಮಾರು 40 ಜನರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದ ಈ ಯುವತಿಯು ಮಂಗಳವಾರ ಸಂಜೆ 5:20ರ ಸುಮಾರಿಗೆ ತನ್ನ ಕುಟುಂಬ ಸದಸ್ಯರೊಡನೆ ಜಲಪಾತ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಗುಂಪಿನಿಂದ ಬೇರ್ಪಟ್ಟು ನಾಪತ್ತೆಯಾಗಿದ್ದಾಳೆ.

ಈ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳೀಯರ ಸಹಾಯದೊಂದಿಗೆ ತೀವ್ರ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ. ದಟ್ಟವಾದ ಅರಣ್ಯ ಮತ್ತು ಕಡಿದಾದ ಬೆಟ್ಟಗುಡ್ಡಗಳಿಂದ ಕೂಡಿದ ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವುದು ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಪಶ್ಚಿಮ ಘಟ್ಟಗಳ ಮಂಜು ಮುಸುಕಿದ ವಾತಾವರಣ ಮತ್ತು ಕತ್ತಲು ಆವರಿಸುತ್ತಿರುವುದು ಶೋಧ ಕಾರ್ಯಕ್ಕೆ ಹೆಚ್ಚಿನ ಅಡ್ಡಿ ಉಂಟುಮಾಡುತ್ತಿದೆ.
ದತ್ತಪೀಠದ ಸಮೀಪವೇ ಇರುವ ಮಾಣಿಕ್ಯಧಾರದಲ್ಲಿ ಯುವತಿ ನಾಪತ್ತೆಯಾಗಿರುವುದು ಪ್ರವಾಸಿಗರಲ್ಲಿ ತೀವ್ರ ಆತಂಕ ಮೂಡಿಸಿದೆ. ಪ್ರಸ್ತುತ ಹುಡುಕಾಟ ಮುಂದುವರಿದಿದ್ದು ನಾಪತ್ತೆಯಾದ ನಂದನಾಳ ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
