ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವನ್ನ SIT ತನಿಖೆ ಮಾಡುತ್ತಿದೆ .ಆದರೆ SIT ಸಂಸ್ಥೆ , ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ.ಶಿವಕುಮಾರ್ ರ ಕೈಗೊಂಬೆಯಾಗಿದೆ, ತನಿಖೆ ಪಾರದರ್ಶಕವಾಗಿಲ್ಲ ಅಂತ ಆರೋಪಿಸಿ ಮಾಜಿ ಸಿಎಂ ಕುಮಾರಸ್ವಾಮಿಯವರು ನಿನ್ನೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರನ್ನು ಭೇಟಿಯಾಗಿದ್ದರು. ಅಲ್ಲದೆ ಈ ಕೇಸನ್ನು ಸಿಬಿಐಗೆ ವಹಿಸಬೇಕೆಂದು ಮನವಿ ಮಾಡಿದ್ದರು.
ಈ ಬಗ್ಗೆ ಇವತ್ತು ಸಿಎಂ ಸಿದ್ದರಾಮಯ್ಯ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಲು SIT ಗೆ ನೀಡಿದ್ದೇವೆ. ನಮಗೆ ನಮ್ಮ ಪೊಲೀಸರ ಮೇಲೆ ಸಂಪೂರ್ಣ ವಿಶ್ವಾಸವಿದೆ, ನಂಬಿಕೆ ಇದೆ. ಅವ್ರು ಕಾನೂನು ಪ್ರಕಾರ ತನಿಖೆ ಮಾಡಿ ವರದಿ ಕೊಡುತ್ತಾರೆ. ಬಿಜೆಪಿಯವರು 2013 ರಲ್ಲಿ ಸಿಬಿಐಗೆ ಒಂದೂ ಕೇಸ್ ಕೊಟ್ಟಿರಲಿಲ್ಲ. ಆಗ ಬಿಜೆಪಿಯವರು ಸಿಬಿಐ ಸಂಸ್ಥೆಯನ್ನು ಕರಪ್ಶನ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅಂತ ಕರೆಯುತ್ತಿದ್ದರು. ದೇವೇಗೌಡರು ಏನಂತ ಕರೆಯುತ್ತಿದ್ದರು ಗೊತ್ತಾ? ಚೋರ್ ಬಚಾವೋ ಸಂಸ್ಥೆ ಅಂತ ಹೇಳುತ್ತಿದ್ದರು. ಈಗ ಇದ್ದಕ್ಕಿದ್ದಂತೆ SIT ಬದಲಿಗೆ ಸಿಬಿಐ ಬೇಕು ಅಂತ ಹೇಳುತ್ತಿದ್ದಾರೆ. ಈಗ ಸಿಬಿಐ ಮೇಲೆ ಅಷ್ಟು ನಂಬಿಕೆ ಬಂದಿದೆಯಾ ?
ನಮ್ಮ ಸರ್ಕಾರ ಯಾವತ್ತೂ ಕಾನೂನು ಪ್ರಕಾರ ಕೆಲಸ ಮಾಡುತ್ತದೆ. ಒಂದು ಸರ್ಕಾರೀ ಸಂಸ್ಥೆ ಕೆಲಸ ಮಾಡುತ್ತಿದೆ ಅಂದರೆ, ನಾನು ಮಧ್ಯಪ್ರವೇಶಿಸುವುದಿಲ್ಲ. ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಾರೆ ಅಂತ ನಂಬಿಕೆ ಇದೆ ಅಂತ ಸಿದ್ದರಾಮಯ್ಯ ಹೇಳಿದರು. ನಾನು ಮುಂಚೆಯಿಂದಲೂ ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನಿನ ವಿರುದ್ಧ ಕೆಲಸ ಮಾಡಿ ಅಂತ ಯಾರಿಗೂ ಯಾವತ್ತೂ ಹೇಳುವುದಿಲ್ಲ, ಕಾನೂನು ಪ್ರಕಾರವೇ ಕೆಲಸ ಮಾಡಿ ಅಂತ ನಾನು ಹೇಳುತ್ತೇನೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದರು.