ಚಿಕ್ಕಮಗಳೂರು: ಜಾತಿ ಜಾತಿ ಮಧ್ಯೆ ಕಂದಕ ಸೃಷ್ಟಿಸಿ ಹಿಂದೂ ಧರ್ಮವನ್ನು ಹಿಂಬಾಗಿಲಿನಿಂದ ನುಚ್ಚುನೂರು ಮಾಡಿ ರಾಜಕೀಯ ಮಾಡಲು ಮುಖ್ಯಮಂತ್ರಿಗಳು ಹೊರಟಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸಿ.ಹೆಚ್ ಲೋಕೇಶ್ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಧರ್ಮ ಧರ್ಮಗಳ ನಡುವೆ ಕಲಹ ಸೃಷ್ಟಿಸಲು ಜಾತಿಗಣತಿ ಷಡ್ಯಂತ್ರ ನಡೆಸಲಾಗುತ್ತಿದೆ. ವಿವಿಧ ಸಂಘಟನೆಗಳು ಮತ್ತು ಜಾತಿಗಳು ಈ ಹಿಂದೆ ಕಾಂತರಾಜ್ ಆಯೋಗದ ಜಾತಿಗಣತಿಗೆ ವಿರೋಧ ವ್ಯಕ್ತವಾಗಿದ್ದನ್ನು ಪರಿಗಣಿಸಿ ಸಮೀಕ್ಷೆ ನಡೆಸಲಾಗಿದ್ದು, ಈಗ ಹಿಂದೂ ಧರ್ಮವನ್ನು ಒಡೆಯುವ ಉದ್ದೇಶದಿಂದ ನೂರಾರು ಕೋಟಿ ರೂಗಳನ್ನು ವ್ಯಯಿಸಿ ಜಾತಿ ಗಣತಿ ಹುನ್ನಾರ ನಡೆಸುತ್ತಿದ್ದಾರೆಂದು ದೂರಿದರು.
ಎಲ್ಲಾ ಜಾತಿಗಳು ಸೇರಿ ಹಿಂದೂ ಧರ್ಮವಾಗಿದೆ. ಜಾತಿಗಳನ್ನು ಒಡೆದು ಮತಾಂತರಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಸಮೀಕ್ಷೆಯಲ್ಲಿ ಹಿಂದೂಗಳು ಕ್ರಿಶ್ಚಿಯನ್ ಆಗಿದ್ದಾರೆ. ಮುಸಲ್ಮಾನರು ಕ್ರಿಶ್ಚಿಯನ್ಗಳಾಗಿ ಮತಾಂತರಗೊಂಡಿದ್ದವರು ತಮ್ಮ ಮೂಲ ಧರ್ಮಕ್ಕೆ ವಾಪಾಸ್ ಆಗಿರುವ ನಿದರ್ಶನಗಳು ಇವೆ ಎಂದು ಹೇಳಿದರು.
ಕ್ರಿಶ್ಚಿಯನ್ಗೆ ಮತಾಂತರಗೊಂಡಿರುವ ಸುಮಾರು ೪೭ ಜಾತಿಗಳಲ್ಲಿ ಕಾಂಗ್ರೆಸ್ ದೇಶದಲ್ಲಿ ಶಾಂತಿ ಕದಡುವ, ಕಂದಕಗಳನ್ನು ಸೃಷ್ಟಿಸಿ ಗಲಭೆ ಮೂಲಕ ಶಾಂತಿಗೆ ಧಕ್ಕೆ ತರುವ ಯತ್ನಗಳು ನಡೆದಿವೆ ಎಂದು ವಿವರಿಸಿದರು.
ಯಾರು ಮತಾಂತರಗೊಂಡಿದ್ದಾರೆ ಅವರನ್ನು ಸ್ಪಷ್ಟವಾಗಿ ಕ್ರಿಶ್ಚಿಯನ್ ಎಂದು ಪರಿಗಣಿಸಬೇಕು. ಆದರೆ, ಹರಿಜನ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಎಂಬಿತ್ಯಾದಿಗಳಾಗಿ ವಿಂಗಡಿಸಿ ಮೀಸಲಾತಿ ನೀಡುವ ಕಾಂಗ್ರೆಸ್ ಪಕ್ಷದ ಹುನ್ನಾರವನ್ನು ಖಂಡಿಸಿದರು.
ಜಿಲ್ಲೆಯಾದ್ಯಂತ ಈಗಾಗಲೇ ರಾಜ್ಯ ಹಿಂದುಳಿದ ಆಯೋಗದ ಹೆಸರಿನಲ್ಲಿ ಮನೆಯ ವಿದ್ಯುತ್ ಮೀಟರ್ ಸ್ಟಿಕ್ಕರ್ ಅಂಟಿಸಲಾಗಿದ್ದು, ಜನರ ತೆರಿಗೆ ಹಣವನ್ನು ರಾಜ್ಯಸರ್ಕಾರ ಜಾತಿಗಣತಿ ಹೆಸರಿನಲ್ಲಿ ಪೋಲುಮಾಡುತ್ತಿದೆ ಎಂದು ದೂರಿದರು.
ಜಿಲ್ಲಾ ವಕ್ತಾರ ಬಿಜಿ ಸೋಮಶೇಖರ್ ಮಾತನಾಡಿ, ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿ ಬೆಳೆ ಹಾನಿ ಜೊತೆಗೆ ಜೀವ ಹಾನಿಯೂ ಆಗಿದೆ. ಆ ಭಾಗದ ರೈತರು, ಕಾರ್ಮಿಕರು ಜೀವಭಯದಲ್ಲಿ ಇದ್ದಾರೆ. ಕೂಡಲೇ ಆನೆ ಕಾರಿಡಾರ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ತರೀಕೆರೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿರುವವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಂಡು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಕ್ತಾರ ಹೆಚ್.ಎಸ್. ಪುಟ್ಟಸ್ವಾಮಿ, ಮಾಜಿ ತಾ.ಪಂ ಅಧ್ಯಕ್ಷ ನೆಟ್ಟೆಕೆರೆಹಳ್ಳಿ ಜಯಣ್ಣ ಉಪಸ್ಥಿತರಿದ್ದರು.
