ಬೆಂಗಳೂರು : ಕರ್ನಾಟಕ ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿ ಒಂದಾದ ಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿ ಡಾ. ರಾಮಚಂದ್ರ ರಾವ್ ಅವರ ರಾಸಲೀಲೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೊಡ್ಡ ಮಟ್ಟದ ರಾಜಕೀಯ ಮತ್ತು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
ಡಿಜಿಪಿ ಕಚೇರಿಯಲ್ಲೇ ಸಮವಸ್ತ್ರ ಧರಿಸಿದ್ದ ಸಂದರ್ಭದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯಗಳು ಸೀಕ್ರೆಟ್ ಕ್ಯಾಮರಾದಲ್ಲಿ ದಾಖಲಾಗಿದ್ದು, ಇದು ಇಡೀ ಇಲಾಖೆಗೆ ಮುಜುಗುರ ತಂದಿದೆ.
ಈ ಘಟನೆ ಇಂದು ಬೆಳಿಗ್ಗೆಯಷ್ಟೇ ತಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಿ ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಮತ್ತು ಇಂತಹ ನಡವಳಿಕೆಗಳನ್ನು ಸಹಿಸುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಆತಂಕಕ್ಕೊಳಗಾದ ರಾಮಚಂದ್ರ ರಾವ್ ಅವರು ಸ್ಪಷ್ಟನೆ ನೀಡಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನಿವಾಸಕ್ಕೆ ದೌಡಾಯಿಸಿದ್ದರು. ಆದರೆ, ಈ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸಚಿವರು ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದಲ್ಲದೆ, ತಮ್ಮ ನಿವಾಸದ ಗೇಟ್‌ನಿಂದಲೇ ವಾಪಸ್ ಕಳುಹಿಸುವ ಮೂಲಕ ಕಠಿಣ ಸಂದೇಶ ರವಾನಿಸಿದ್ದಾರೆ.
ಈ ನಡುವೆ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಅಧಿಕಾರಿ ರಾಮಚಂದ್ರ ರಾವ್ ಅವರು, ಇದು ಸುಮಾರು ಎಂಟು ವರ್ಷಗಳ ಹಳೆಯ ವಿಡಿಯೋ ಆಗಿದ್ದು, ಸದ್ಯ ಇದನ್ನು ಎಡಿಟ್ ಮಾಡಿ ಹರಿಬಿಡಲಾಗಿದೆ ಎಂದು ಆರೋಪಿಸಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಮತ್ತು ವಿಡಿಯೋ ಹರಿಬಿಟ್ಟವರ ಉದ್ದೇಶವೇನು ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತಂದಿರುವ ಈ ಪ್ರಕರಣದ ಕುರಿತು ಶಾಸಕ ಸುರೇಶ್ ಕುಮಾರ್ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದು, ಹಿರಿಯ ಅಧಿಕಾರಿಯೊಬ್ಬರ ಇಂತಹ ವರ್ತನೆ ಖಂಡನೀಯ ಎಂದು ಹೇಳಿದ್ದಾರೆ.
