ಸಕಲೇಶಪುರ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಪೂರಕ ಸಾಕ್ಷಿ ನೀಡುವ ವ್ಯಕ್ತಿಯ ಹೇಳಿಕೆಯಿಂದ ರಾಜ್ಯದ ಜನತೆಯಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಈ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ ವಹಿಸಬೇಕೆಂದು ಭೀಮ ಕೋರಿಗಾವ್ ವಿಜಯೋತ್ಸವ ಸಮಿತಿ ಚಾರಿಟಬಲ್ ಟ್ರಸ್ಟ್ ಹಾಗೂ ವಿವಿಧ ದಲಿತಪರ ಸಂಘಟನೆಗಳು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಜಮಾವಣೆಗೊಂಡ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು, ವಿದ್ಯಾರ್ಥಿನಿ ಸೌಜನ್ಯಾ ಸೇರಿದಂತೆ ಸಾವಿರಾರು ಸಾವಿಗೆ ಸರಕಾರ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಕಲ್ಗನೆ ಪ್ರಶಾಂತ್ ಅವರು, ಧರ್ಮಸ್ಥಳದ ಪರಿಸರದಲ್ಲಿ ಸಾವಿರಾರು ಸಾವಿನ ಹತ್ಯೆಗಳು ನಡೆದಿದ್ದು, ಈ ಕುರಿತು ನ್ಯಾಯಾಲಯಕ್ಕೆ ಸಾಕ್ಷ್ಯ ಸಲ್ಲಿಸಲು ನಾನು ಸಹಕರಿಸುತ್ತೇನೆ ಎಂಬಂತೆ ಒಬ್ಬ ವ್ಯಕ್ತಿ ವಕೀಲರ ಮೂಲಕ ಮನವಿ ಸಲ್ಲಿಸಿದ್ದಾನೆ. ಇದರಿಂದ ಧರ್ಮಸ್ಥಳದ ಭಕ್ತರಲ್ಲಿ ಅನುಮಾನಗಳ ಗೂಡು ನಿರ್ಮಾಣವಾಗಿದೆ. ಈ ಕಾರಣದಿಂದ ಸರಕಾರ ಕೂಡಲೇ ತನಿಖೆಯನ್ನು ಎಸ್‌ಐಟಿಗೆ ವಹಿಸಿ, ನೂರಾರು ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ಹೇಳಿದರು.
ಧರ್ಮಸ್ಥಳದಲ್ಲಿ ನಡೆದಿರುವ ಅಸಂಖ್ಯಾತ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ಕುರಿತಂತೆ ನಿಖರ ತನಿಖೆ ನಡೆಯಬೇಕು. ಅಪರಾಧಿಗಳನ್ನು ರಕ್ಷಿಸುವ ಉದ್ದೇಶದಿಂದ ಈವರೆಗೆ ತನಿಖೆ ತನಿಖೆಯ ತಪ್ಪಿದೆ. ಆದರೆ ಇನ್ನು ಮುಂದೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ನ್ಯಾಯ ದೊರಕಿಸಬೇಕು. ಈ ರೀತಿಯ ಘಟನೆಯು ಪುನರಾವೃತ್ತಿಯಾಗದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಭೀಮ ಕೋರೆಂಗಾವ್ ಸಮಿತಿಯ ಮುಖಂಡ ಹೆನ್ನಲಿ ಶಾಂತ ರಾಜ್ ಅವರು ಮಾತನಾಡಿ, ಇತ್ತೀಚೆಗೆ ಅನಾಮಿಕ ವ್ಯಕ್ತಿಯೊಬ್ಬರು ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ತಾವೇ ಹೂತು ಹಾಕಿದವನು ಎಂದು ನ್ಯಾಯಾಲಯಕ್ಕೆ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದಾರೆ. ಇದರಿಂದ ರಾಜ್ಯದ ಜನತೆಯಲ್ಲಿ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಬೇಕು. ಈ ಪ್ರಕರಣದ ಸತ್ಯಾಸತ್ಯತೆ ಹೊರಬರುವಂತೆ ತನಿಖೆ ನಡೆಯಬೇಕು. ಅನ್ಯಾಯಕ್ಕೊಳಗಾದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಆ ವ್ಯಕ್ತಿಗೆ ಸೂಕ್ತ ಭದ್ರತೆ ಒದಗಿಸಬೇಕು. ಇದರೊಂದಿಗೆ ಈ ಪ್ರಕರಣದಲ್ಲಿ ಯಾವುದೇ ಪ್ರಭಾವಿ ವ್ಯಕ್ತಿಗಳೂ ತಪ್ಪಿತಸ್ಥರಾಗಿದ್ದರೆ, ಅವರಿಗೂ ಕಠಿಣ ಶಿಕ್ಷೆ ನೀಡಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಭೀಮ ಕೋರೆಂಗಾವ್ ವಿಜಯೋತ್ಸವ ಸಮಿತಿಯ ಅಧ್ಯಕ್ಷ ರಾಜಶೇಖರ್, ದಲಿತ ಮುಖಂಡರುಗಳಾದ ನಲ್ಲುಲಿ ಈರಯ್ಯ, ಚಂದ್ರು ಅಳೆಕೆರೆ, ಸಂದೀಪ್ ಬೆಳಗೋಡು, ಅನಿಲ್, ಪೇಪರ್ ಮಂಜು, ಗೋಪಾಲ್ ಮಳಲಿ, ಗಂಗಾಧರ್ ಬೆಳಗೋಡು, ಜಗದೀಶ್, ಗಿರೀಶ್ ಕಲ್ಗನೆ ಮತ್ತಿತರರು ಭಾಗವಹಿಸಿದ್ದರು.