Monday, February 9, 2026
Homeಕ್ರೈಮ್ಧರ್ಮಸ್ಥಳ-ಸುಬ್ರಹ್ಮಣ್ಯ ಬಸ್‌ ಸೇವೆ ಸ್ಥಗಿತ, ಪ್ರಯಾಣಿಕರು, ವಿದ್ಯಾರ್ಥಿಗಳ ಪರದಾಟ!

ಧರ್ಮಸ್ಥಳ-ಸುಬ್ರಹ್ಮಣ್ಯ ಬಸ್‌ ಸೇವೆ ಸ್ಥಗಿತ, ಪ್ರಯಾಣಿಕರು, ವಿದ್ಯಾರ್ಥಿಗಳ ಪರದಾಟ!

ದಕ್ಷಿಣ ಕನ್ನಡ: ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಕೆಲವು ತಿಂಗಳ ಹಿಂದೆ ವಿದ್ಯಾರ್ಥಿಗಳ ಹಾಗೂ ಪ್ರಯಾಣಿಕರ ಬೇಡಿಕೆ ಪರಿಗಣಿಸಿ ಧರ್ಮಸ್ಥಳದಿಂದ ಗ್ರಾಮೀಣ ಭಾಗಗಳಿಗೆ ಹೊಸ ಬಸ್‌ ರೂಟ್‌ಗಳಿಗೆ ಚಾಲನೆ ನೀಡಿದ್ದರು.

ಈ ಪೈಕಿ ಧರ್ಮಸ್ಥಳದಿಂದ ಕೊಕ್ಕಡ-ನೆಲ್ಯಾಡಿ-ಬಲ್ಯ-ಕಡಬ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ ಮೂರು ವಾರಗಳಿಂದ ಭಾನುವಾರದ ಸಂಚಾರ ನಿಲ್ಲಿಸಿದೆ. ಈ ಬಸ್‌ ಕೌಕ್ರಾಡಿ, ನೆಲ್ಯಾಡಿ, ಬಲ್ಯ, ಕೊಕ್ಕಡ ಹಾಗೂ ಕಡಬ ಭಾಗದ ಜನರಿಗೆ ಪ್ರಯೋಜನಕಾರಿಯಾಗಿತ್ತು. ವಿದ್ಯಾರ್ಥಿಗಳು, ಕಾರ್ಮಿಕರು, ನೌಕರರು, ವ್ಯಾಪಾರಿಗಳು ಈ ಬಸ್ಸನ್ನೇ ಅವಲಂಬಿತರಾಗಿದ್ದರು.

ಭಾನುವಾರ ಶಾಲಾ-ಕಾಲೇಜು ವಿದ್ಯಾರ್ಥಿಗಳು ನೆಲ್ಯಾಡಿ, ಕೊಕ್ಕಡ, ಕಡಬ, ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ ಭಾಗಕ್ಕೆ ತರಬೇತಿ, ಕೋಚಿಂಗ್‌, ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ತರಗತಿಗಳಿಗೆ ಹೋಗುತ್ತಾರೆ. ಅದಕ್ಕಾಗಿ ಈ ಬಸ್ಸನ್ನೇ ನಂಬಿದ್ದರು.

ಬಸ್‌ ಸೇವೆ ಸ್ಥಗಿತಗೊಳಿಸಿದ ಬಗ್ಗೆ ಸಾರ್ವಜನಿಕರು ಧರ್ಮಸ್ಥಳ ಡಿಪೋ ಮ್ಯಾನೇಜರ್‌ರನ್ನು ವಿಚಾರಿಸಿದಾಗ ಭಾನುವಾರ ಧರ್ಮಸ್ಥಳಕ್ಕೆ ಹೆಚ್ಚಿನ ಯಾತ್ರಾರ್ಥಿಗಳು ಬರುವುದರಿಂದ ಬಸ್‌ ರೂಟ್‌ ತಾತ್ಕಾಲಿಕವಾಗಿ ಬದಲಾಯಿಸಿದ್ದೇವೆ ಎಂಬ ಉತ್ತರ ನೀಡಿದ್ದಾರೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸ್ಥಳೀಯ ಜನರ ಸಂಚಾರ ಕಸಿದುಕೊಳ್ಳುವ ಅಧಿಕಾರಿಗಳ ಕ್ರಮ ಸರಿಯಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.

ಕೆಎಸ್ಸಾರ್ಟಿಸಿ ಬಸ್‌ ಜನರ ತೆರಿಗೆ ಹಣದಿಂದ ಓಡುತ್ತದೆ. ಯಾತ್ರಿಕರನ್ನು ಮಾತ್ರ ಗಮನಿಸಿದರೆ ಇತರ ಪ್ರಯಾಣಿಕರ ಗತಿ ಏನು ಎಂದು ಜನ ಕೇಳುತ್ತಿದ್ದಾರೆ. ಕಡಬ ತಾಲೂಕು ಕೇಂದ್ರವಾಗಿರುವುದರಿಂದ ಈ ಭಾಗದ ಜನರ ದಿನನಿತ್ಯದ ಕಾರ‍್ಯಗಳು ಕಡಬದಲ್ಲೇ ನಡೆಯುತ್ತವೆ. ಭಾನುವಾರ ಬಸ್‌ ಸಂಚಾರ ಸ್ಥಗಿತಗೊಂಡ ಕಾರಣ, ಸ್ಥಳೀಯರು ಕಡಬಕ್ಕೆ ಬರಲು ಕಷ್ಟ ಪಡುತ್ತಿದ್ದಾರೆ.

ಖಾಸಗಿ ವಾಹನಗಳ ಅಭಾವದಿಂದ ಕೆಲವರು ಲಿಫ್ಟ್‌ ಕೇಳಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು 7-8 ಕಿ.ಮೀ. ದೂರ ನಡೆದು ಬಸ್‌ ಹಿಡಿಯಬೇಕಾಗುತ್ತಿದೆ. ಕೊಕ್ಕಡ-ನೆಲ್ಯಾಡಿ-ಕಡಬ ಮಾರ್ಗದ ಬಸ್‌ ಸೇವೆ ಅನೇಕ ವರ್ಷಗಳ ಬೇಡಿಕೆಯಾಗಿದ್ದರಿಂದ ಹೊಸ ಬಸ್‌ ಆರಂಭಗೊಂಡಾಗ ಜನ ಸಂತಸಗೊಂಡಿದ್ದರು. ಈಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಸ್‌ ಸಂಚಾರ ನಿಂತಿದೆ. ಇದನ್ನು ಮತ್ತೆ ಆರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!