ಬೆಂಗಳೂರು : ಅರಣ್ಯ ಒತ್ತುವರಿಯನ್ನು ಕಟ್ಟು ನಿಟ್ಟಾಗಿ ತಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಅರಣ್ಯ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ 2022, 2023 ನೇ ಸಾಲಿನ ಪದಕ ವಿತರಿಸಿ ಮಾತನಾಡಿದರು. ಅರಣ್ಯ ಸಂಪತ್ತಿನ ಸಂರಕ್ಷಣೆಯ ಮಹತ್ವ ಅರಿತಿದ್ದ ಇಂದಿರಾಗಾಂಧಿಯವರು ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದ್ದಾರೆ. ಇದು ಅತ್ಯಂತ ನಿಷ್ಠುರವಾಗಿದೆ. ಅರಣ್ಯಾಧಿಕಾರಿಗಳೂ ಅಷ್ಟೇ ನಿಷ್ಠುರವಾಗಿ ಅರಣ್ಯ ಒತ್ತುವರಿ ತಡೆಯಬೇಕು ಎಂದರು.
ಕಾಡು ಪ್ರಾಣಿಗಳಿಗೆ ಆಹಾರ, ಮೇವು ಮತ್ತು ನೀರು ಕಾಡಿನ ಒಳಗೇ ಅಗತ್ಯವಿದ್ದಷ್ಟು ದೊರೆತರೆ ಅವು ಕಾಡಿನಿಂದ ಹೊರಗೆ ಬರುವುದಿಲ್ಲ. ಆಗ ಮಾನವ-ಪ್ರಾಣಿ ಸಂಘರ್ಷಕ್ಕೆ ತಡೆ ಬೀಳುತ್ತದೆ. ಸಚಿವ ಈಶ್ವರ್ ಖಂಡ್ರೆಯವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನಿಮ್ಮ ಸಂಪೂರ್ಣ ಸಹಕಾರ ಸಿಕ್ಕರೆ ಇನ್ನಷ್ಟು ಕ್ರಾಂತಿಕಾರಕ ಕೆಲಸ ಮಾಡುತ್ತಾರೆ ಎಂದು ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಕರೆ ನೀಡಿದರು.
ವನ್ಯಜೀವಿ ಮತ್ತು ಅರಣ್ಯ ಸಂಪತ್ತು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದು. ಆಫ್ರಿಕಾ ಬಿಟ್ಟರೆ ಅತಿ ಹೆಚ್ಚು ಅರಣ್ಯ ಪ್ರಾಣಿ ಸಂಪತ್ತು ಇರುವುದು ಭಾರತದಲ್ಲೇ. ಹಾಗೆಯೇ ಅರಣ್ಯದ ಪ್ರಮಾಣ ಇನ್ನೂ ಹೆಚ್ಚಾಗಬೇಕಿದೆ. ಅರಣ್ಯ ಸಂಪತ್ತು ಕಾಪಾಡುವ ವಿಚಾರದಲ್ಲಿ ಪದಕ ಪುರಸ್ಕತರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದರು.
ಅರಣ್ಯ, ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಅರಣ್ಯಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರ್ ದೀಕ್ಷಿತ್ ಉಪಸ್ಥಿತರಿದ್ದರು.
