ನರಸಿಂಹರಾಜಪುರ: ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು, ಶೃಂಗೇರಿ ವಿಧಾನಸಭೆ ಕ್ಷೇತ್ರದ ಹಿರಿಯ ನೇತಾರರು ಆಗಿದ್ದ ಎಚ್.ಟಿ.ರಾಜೇಂದ್ರ (70) ಅವರ ಅಂತ್ಯ ಸಂಸ್ಕಾರ ಸೋಮವಾರ ಸಂಜೆ ತೋಟದಲ್ಲಿ ನಡೆಯಿತು.
ಪ್ರಸ್ತುತ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಜೆಡಿಎಸ್ ರಾಜ್ಯಘಟಕದ ಉಪಾಧ್ಯಕ್ಷರೂ ಆಗಿದ್ದ ಎಚ್.ಟಿ.ರಾಜೇಂದ್ರ ಅವರು ಭಾನುವಾರ ರಾತ್ರಿ ತಾಲ್ಲೂಕಿನ ಮಡಬೂರು ಗ್ರಾಮದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಇದ್ದಾರೆ. ಮಡಬೂರಿನಿಂದ ಎಚ್.ಟಿ.ರಾಜೇಂದ್ರ ಅವರ ಪಾರ್ಥಿವ ಶರೀರವನ್ನು ಪಟ್ಟಣಕ್ಕೆ ತಂದು ಮೆರವಣಿಗೆಯ ನಡೆಸಲಾಯಿತು.

ಎಚ್.ಟಿ.ರಾಜೇಂದ್ರ ಅವರ ನಿಧನದ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟು ಮುಚ್ಚಿ ಗೌರವ ಸಲ್ಲಿಸಿದರು. ಮೆರವಣಿಗೆ ವೇಳೆ ಪಟ್ಟಣದ ಶಾಲೆ, ಆಸ್ಪತ್ರೆ, ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಅಂತಿಮ ನಮನ ಸಲ್ಲಿಸಿದರು. ಶಾರದ ವಿದ್ಯಾಮಂದಿರ ಶಾಲೆಯ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಅಂತಿಮ ದರ್ಶನ ಪಡೆದರು.
ಹರಿದು ಬಂದ ಜನಸಾಗರ: ಎಚ್.ಟಿ.ರಾಜೇಂದ್ರ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮದಿಂದ ಪಟ್ಟಣದ ಶಾರದ ವಿದ್ಯಾಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು. ರಸ್ತೆ ಉದ್ದಕ್ಕೂ ಜನರು ಮೃತರ ನಿಧನಕ್ಕೆ ಕಂಬನಿ ಮಿಡಿದು ಅಂತಿಮ ನಮನ ಸಲ್ಲಿಸಿದರು.

ಶಾಸಕ ಟಿ.ಡಿ.ರಾಜೇಗೌಡ, ವಿಧಾನಪರಿಷತ್ ಸದಸ್ಯರಾದ ಬೋಜೇಗೌಡ, ಸಿ.ಟಿ.ರವಿ, ಭದ್ರಾ ಕಾಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್, ಮಾಜಿ ಶಾಸಕ ಡಿ.ಎನ್.ಜೀವರಾಜ್, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಸೇರಿ ಹಲವು ಗಣ್ಯರು ಮೃತರ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು.