ಎಚ್.ಡಿ.ಕೋಟೆ: ಸ್ನೇಹಿತರ ಮನೆಯಲ್ಲಿ ಪಿತೃಪಕ್ಷದ ಊಟ ಮುಗಿಸಿಕೊಂಡು ಬೈಕ್ ನಲ್ಲಿ ವಾಪಸ್ ಬರುವಾಗ ರಸ್ತೆ ಅಪಘಾತವಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹುಣಸೂರು – ಬೇಗೂರು ರಸ್ತೆ ಮಾರ್ಗದ ಕೆ.ಎಡತೊರೆ ಬಳಿ ನಡೆದಿದೆ.
ಎಚ್.ಡಿ.ಕೋಟೆ ಪಟ್ಟಣದ ನಿವಾಸಿ ಮಂಜುನಾಥ್ (42) ಮೃತ ದುರ್ದೈವಿ. ಗುರುವಾರ ರಾತ್ರಿ 11.30ರ ವೇಳೆ ಹುಣಸೂರು – ಬೇಗೂರು ರಸ್ತೆ ಮಾರ್ಗದ ಕೆ. ಎಡತೊರೆ ಬಳಿ ಹಿಂಬದಿಯಿಂದ ಅತೀ ವೇಗವಾಗಿ ಬರುತ್ತಿದ್ದ ಕಾರೊಂದು ಬೈಕ್ ಗೆ ಗುದ್ದಿದ ಕಾರಣ 100 ಮೀ ದೂರದಲ್ಲಿ ಕಂದಕಕ್ಕೆ ಉರುಳಿದ ಬೈಕ್ ಸವಾರ ತಲೆಗೆ ಕಲ್ತಲು ಹೊಡೆದ ಕಾರಣ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.
ಅಪಘಾತದ ವೇಳೆ ನಿಯಂತ್ರಣ ತಪ್ಪಿದ ಕಾರು ಮೂರ್ನಾಲ್ಕು ಬಾರಿ ಉರುಳಿದ ಕಾರು ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಮೃತ ಮಂಜು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಎಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
