ಬೆಂಗಳೂರು : ಸ್ಯಾಂಡಲ್‌ವುಡ್ ತಾರೆಯರಾದ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ದಂಪತಿಗೆ ಹೆಣ್ಣು ಮಗುವಿನ ಜನನವಾಗಿದೆ. ಹೆಣ್ಣು ಮಗುವಿನ ತಾಯಿಯಾದ ವಿಚಾರವನ್ನು ಹರ್ಷಿಕಾ ಪೂಣಚ್ಚ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸುದೀರ್ಘ ಕಾಲದ ಗೆಳೆಯರಾಗಿದ್ದ ಉಳ್ಳಿಯಡ ಭುವನ್ ಪೊನ್ನಣ್ಣ ಹಾಗೂ ಉದ್ದಪಂಡ ಹರ್ಷಿಕಾ ಪೂಣಚ್ಚ ಕಳೆದ ವರ್ಷ ಕೊಡವ ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹವಾಗಿದ್ದರು. ಮದುವೆಯಾಗಿ ವರ್ಷ ತುಂಬುವುದರೊಳಗೆ ಗುಡ್ ನ್ಯೂಸನ್ನೂ ಕೊಟ್ಟಿದ್ರು. ಅಕ್ಟೋಬರ್ ತಿಂಗಳಿನಲ್ಲಿ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದರು. ನಿರೀಕ್ಷೆಯಂತೆ ಅಕ್ಟೋಬರ್ 03ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಹರ್ಷಿಕಾ. ಸಾಮಾಜಿಕ ತಾಲತಾಣದಲ್ಲಿ ಈ ವಿಚಾರ ಹಂಚಿಕೊಂಡಿರುವ ಹರ್ಷಿಕಾ, ಸದ್ಯಕ್ಕೆ ʼಚಾಯಿಕರ್ತಿ ಉಳ್ಳಿಯಡʼ(ಕೊಡವ ಭಾಷಿಯಲ್ಲಿ ಉಳ್ಳಿಯಡ ಸುಂದರಿ) ಅಂತ ಕರೆಯುವಂತೆ ಕ್ಯೂಟ್ ಆಗಿ ಕೇಳಿಕೊಂಡಿದ್ದಾರೆ.
ಗರ್ಭಿಣಿಯಾಗಿದ್ದ ಸಂದರ್ಭ ವಿಭಿನ್ನ ಶೈಲಿಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು ಸಾಕಷ್ಟು ಸುದ್ದಿ ಮಾಡಿದ್ದರು. ಸ್ಯಾಂಡಲ್‌ವುಡ್‌ನ ತಾರೆಯರು ಕೂಡಾ ಹರ್ಷಿಕಾಗೆ ಸೀಮಂತ ಕಾರ್ಯ ನೆರವೇರಿಸಿ ಸಂಭ್ರಮಿಸಿದ್ದರು.






