ಹಾಸನ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಬ್ರೈನ್ ಡೆಡ್ ಆದ ಯುವಕನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪೋಷಕರು ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಸಾಗತವಳ್ಳಿ ಗ್ರಾಮದ ಯೋಗೇಶ್ (35) ಎಂಬುವವರೇ ಅಂಗಾಂಗ ದಾನ ಮಾಡಿದ ಯುವಕ.

ಸಾಗತವಳ್ಳಿ ಗ್ರಾಮದ ನಂಜಮ್ಮ ಹಾಗೂ ನಂಜುಂಡೇಗೌಡ ಅವರ ಪುತ್ರ ಯೋಗೇಶ್ ಕಳೆದ ಆರು ದಿನಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (HIMS) ಹಾಗೂ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಚಿಂತಾಜನಕವಾದ ಕಾರಣ, ಮತ್ತೆ ಅವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಪರಿಶೀಲಿಸಿದ ವೈದ್ಯರು ಯೋಗೇಶ್ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಅಧಿಕೃತವಾಗಿ ಘೋಷಿಸಿದರು. ಮಗನನ್ನು ಕಳೆದುಕೊಂಡ ದುಃಖದ ನಡುವೆಯೂ, ಆತನ ಅಂಗಾಂಗಗಳು ಮತ್ತೊಬ್ಬರ ಜೀವ ಉಳಿಸಲಿ ಎಂಬ ಉದ್ದೇಶದಿಂದ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಝೀರೋ ಟ್ರಾಫಿಕ್ ಮೂಲಕ ರವಾನೆ: ವೈದ್ಯರ ತಂಡ ಯೋಗೇಶ್ ಅವರ ಲಿವರ್ ಹಾಗೂ ಹಾರ್ಟ್ ವಾಲ್ವ್‌ಗಳನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದರು. ಈ ಅಂಗಾಂಗಗಳನ್ನು ತುರ್ತಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ತಲುಪಿಸಲು ಪೊಲೀಸರು ‘ಝೀರೋ ಟ್ರಾಫಿಕ್’ ವ್ಯವಸ್ಥೆ ಮಾಡಿದ್ದರು. ಗ್ರೀನ್ ಕಾರಿಡಾರ್ ಮೂಲಕ ಆಂಬ್ಯುಲೆನ್ಸ್ ವೇಗವಾಗಿ ಸಂಚರಿಸಿ ನಿಗದಿತ ಸಮಯದೊಳಗೆ ಆಸ್ಪತ್ರೆ ತಲುಪಲು ಹೊರಟಿತು,
ತನ್ನ ಮಗ ಇಲ್ಲವಾದರೂ, ಆತನ ಅಂಗಾಂಗಗಳ ಮೂಲಕ ಬೇರೆಯವರಲ್ಲಿ ಅವನು ಜೀವಂತವಾಗಿದ್ದಾನೆ ಎಂಬ ಪೋಷಕರ ನಿರ್ಧಾರಕ್ಕೆ ಜಿಲ್ಲೆಯಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.
