ಅರಕಲಗೂಡು: ಹುಡುಗಿ ವಿಷಯಕ್ಕೆ ಕಾಲೇಜು ಯುವಕರ ನಡುವೆ ಕೆಎಸ್ ಆರ್ ಟಿಸಿ ಬಸ್ ನಲ್ಲೇ ಮಾರಾಮಾರಿ ನಡೆದಿರುವ ಘಟನೆ ತಾಲೂಕಿನಲ್ಲಿ ನಡೆದಿದ್ದು ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಲೂಕಿನ ಸಂತೆಮರೂರು ಬಸ್ ನಲ್ಲಿ ಸೋಮವಾರ ಸಂಜೆ ಸುಮಾರು ಐದು ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು ಯುವಕರ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವತಿ ವಿಚಾರಕ್ಕೆ ಸಂಬಂಧಿಸಿದಂತೆ ಅರಕಲಗೂಡು ಪಟ್ಟಣದಲ್ಲೇ ತಾಲೂಕಿನ ಸಂತೆಮರೂರು ಗ್ರಾಮದ
ವಿದ್ಯಾರ್ಥಿಯೋರ್ವನಿಗೆ ಮತ್ತೊಂದು ಗುಂಪು ಹಲ್ಲೆ ಮಾಡಿದೆ. ಬಳಿಕ ಹಲ್ಲೆಗೊಳಗಾದ ಹಾಗೂ ಹಲ್ಲೆ ಮಾಡಿದ ವಿದ್ಯಾರ್ಥಿಗಳು ಒಂದೇ ಬಸ್ ನಲ್ಲಿ ಪ್ರಯಾಣಿಸಿದ್ದು ಬಸ್ ಸಂತೆಮರೂರು ತಲುಪುತ್ತಿದ್ದಂತೆ ಹಲ್ಲೆಗೊಳಗಾದ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಸೇರಿ ಜಗಳ ತೆಗೆದಿದ್ದು ಈ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಇತ್ತೀಚೆಗೆ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೊಡೆದಾಡುವುದು,
ಮಾದಕ ವ್ಯಸನಗಳಂತ ದುಷ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇಂತಹ ಘಟನೆಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
