ಹಾಸನ : ಭಾರತ ದೇಶದಲ್ಲಿ ಆಂತರಿಕ ದೂರು ಸಮಿತಿಗಳನ್ನ ರಚನೆ ಮಾಡುವುದರಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. 78,000ಕ್ಕೂ ಹೆಚ್ಚು ಆಂತರಿಕ ದೂರು ಸಮಿತಿಗಳನ್ನು ರಚನೆ ಮಾಡಿದ್ದೇವೆ. ಅವುಗಳ ಕುರಿತಾಗಿ ಅರಿವು ಮೂಡಿಸುವುದು ಕೂಡ ಅತ್ಯಗತ್ಯವಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌಧರಿ ಅವರು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ಇರಬೇಕು. ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಆಗಬೇಕು. ಅವರ ಸಮ್ಮುಖದಲ್ಲಿಯೆ ಕಡ್ಡಾಯವಾಗಿ ವಿಚಾರಣೆ ನಡೆಯಬೇಕು ಎಂದರು.
ಪ್ರತಿ ಕಚೇರಿಗಳಲ್ಲಿ ದೂರು ಪೆಟ್ಟಿಗೆಗಳನ್ನು ಇಡಬೇಕು. ಜಿಲ್ಲೆಯಲ್ಲಿ 315 ಆಂತರಿಕ ದೂರು ಸಮಿತಿಗಳನ್ನು ರಚಿಸಲಾಗಿದೆ. ಇನ್ನು 69 ಬಾಕಿ ಇವೆ. ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಆದಂತಹ ಸಂದರ್ಭದಲ್ಲಿ ಆಂತರಿಕ ದೂರು ಸಮಿತಿ ಬಹಳ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಕಾಲಕಾಲಕ್ಕೆ ಇವುಗಳು ಸರಿಯಾಗಿ ನಡೆದರೆ ಮಾತ್ರ ಜನರು ಎಚ್ಚೆತ್ತುಕೊಳ್ಳುತ್ತಾರೆ ಎಂದರು.
ಕಳೆದ ಮೂರು ದಿನದಿಂದ ಜಿಲ್ಲೆಯ ವಿವಿಧ ಕಾಲೇಜುಗಳಿಗೆ, ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ್ದೇನೆ. ಅರಕಲಗೂಡು ತಾಲ್ಲೂಕು ಆಸ್ಪತ್ರೆ ಹಾಗೂ ಹಾಸನದ ಜಿಲ್ಲಾ ಆಸ್ಪತ್ರೆಯನ್ನು ಸಹ ಭೇಟಿ ಮಾಡಿದ್ದೇನೆ. ಅಲ್ಲಿ ಕಂಡು ಬಂದಿರುವAತಹ ಸಮಸ್ಯೆಗಳ ಕುರಿತಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಕೆಲವೊಂದು ಆಸ್ಪತ್ರೆಗಳಲ್ಲಿ ತುರ್ತು ಮಾಡಬೇಕಾದ ಕೆಲಸಗಳನ್ನ ಮಾಡಿ 15 ದಿನಗಳೊಳಗಾಗಿ ಆಯೋಗಕ್ಕೆ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದರು.
ಅರಕಲಗೂಡು ತಾಲ್ಲೂಕಿನಲ್ಲಿ ಯಾವುದೇ ಸರ್ಕಾರಿ ಇಂಜಿನಿಯರಿAಗ್ ಕಾಲೇಜುಗಳಾಗಲಿ, ಪಾಲಿಟೆಕ್ನಿಕ್ ಕಾಲೇಜುಗಳಾಗಲಿ ಇಲ್ಲ ಅದರಲ್ಲೂ ಹೆಣ್ಣು ಮಕ್ಕಳಿಗೆ ಯಾವ ಕಾಲೇಜುಗಳು ಇಲ್ಲದೆ ಇರುವುದರಿಂದ ಮಕ್ಕಳೆಲ್ಲರೂ ಹಾಸನ ಜಿಲ್ಲೆಗೆ ಆಗಮಿಸಬೇಕು ಹಾಗಾಗಿ ಬಡ ಮಕ್ಕಳು ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ ಕಾಲೇಜುಗಳನ್ನು ತೆರೆಯುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಪೊಲೀಸ್ ಠಾಣೆಯನ್ನು ಸಹ ಭೇಟಿ ಮಾಡಿದ್ದೇನೆ. ಜನರು ಠಾಣೆಯಲ್ಲಿ ದೂರುಗಳನ್ನು ಕೊಡಲು ಹೋದಾಗ ಸರಿಯಾಗಿ ಸ್ಪಂದಿಸುವುದಿಲ್ಲ, ಹೆಣ್ಣು ಮಕ್ಕಳಿಗೆ ಗೌರವ ಕೊಡುವುದಿಲ್ಲ, ಎಫ್ ಐ ಆರ್ ಮಾಡುವುದಿಲ್ಲ ಎನ್ನುವ ಸಮಸ್ಯೆಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇಂತಹ ಸಮಸ್ಯೆಗಳು ಕಂಡು ಬಂದಾಗ ಜನರು ಹಿರಿಯ ಪೊಲೀಸ್ ಅಧಿಕಾರಿಯ ಗಮನಕ್ಕೆ ತರಬೇಕು. ಪೊಲೀಸ್ ಠಾಣೆಯಲ್ಲಿ ಕ್ಯೂಆರ್ ಕೋಡ್ ಇರುತ್ತದೆ ಅದನ್ನು ಸ್ಕಾö್ಯನ್ ಮಾಡಿ ದೂರು ನೀಡಬೇಕು ಎಂದರು.
ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು ಸೂಕ್ಷ್ಮತೆಯಿಂದ ವರ್ತಿಸುವಂತೆ ಯಾವ ಯಾವ ಕಾರ್ಯಕ್ರಮಗಳನ್ನು ಮಾಡಿದ್ದೀರಿ ಎಂದು ವರದಿಯನ್ನು ಕೇಳಿದ್ದೇನೆ. ಇತ್ತೀಚೆಗಂತೂ ಮದುವೆಯಾದ ಎರಡೇ ವಾರಕ್ಕೆ, ನಾಲ್ಕು ತಿಂಗಳಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿರುವಂತಹ ಪ್ರಕರಣಗಳು ಕಂಡುಬರುತ್ತಿವೆ. ಈ ರೀತಿಯ ಕೇಸ್‌ಗಳನ್ನು ದಾಖಲು ಮಾಡಿಕೊಳ್ಳಲು ಪ್ರತ್ಯೇಕ ಮಹಿಳಾ ಡೆಸ್ಕ್ ಇರುತ್ತದೆ. ಅಲ್ಲಿ ಯಾವ ರೀತಿಯಾಗಿ ಅವರನ್ನು ಕೌನ್ಸಿಲಿಂಗ್ ಮಾಡುತ್ತಾರೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಕೌನ್ಸಿಲಿಂಗ್ ಮಾಡುವುದಕ್ಕೆ ಕೆಲವು ವಿಧಾನಗಳಿವೆ ಆ ವಿಧಾನಗಳ ಕುರಿತಾಗಿ ಆ ವಿಷಯದಲ್ಲಿ ಪರಿಣಿತರಿರುವ ತಜ್ಞರನ್ನು ಕರೆಸಿ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕೊಡಬೇಕು ಎಂದು ತಿಳಿಸಿದರು.
ಈ ವರ್ಷದಲ್ಲಿ ಜಿಲ್ಲೆಯಲ್ಲಿ ಕಾಣೆಯಾಗಿರುವ ಮಹಿಳೆಯರ ಸಂಖ್ಯೆ 279 ಜನ ಅದರಲ್ಲಿ 236 ಜನರನ್ನು ಕಂಡುಹಿಡಿಯಲಾಗಿದೆ. ಇನ್ನು 43 ಜನರನ್ನು ಪತ್ತೆ ಹಚ್ಚಲಾಗಿಲ್ಲ. ಯಾಕೆ ಪತ್ತೆ ಮಾಡಲು ಆಗಿಲ್ಲ ಎಂಬುದರ ಕುರಿತಾಗಿ ನಮಗೆ ವರದಿಯನ್ನು ನೀಡಿದ್ದಾರೆ. ಅದರ ಕುರಿತಾಗಿ ಮಹಿಳಾ ಆಯೋಗಕ್ಕೆ ಹೋಗಿ ಅದನ್ನು ಪರಿಶೀಲನೆ ಮಾಡಿ ಪುನಃ ವರದಿಯನ್ನು ನೀಡುತ್ತೇನೆ ಎಂದರು.
