ಹಾಸನ: ಕೋಡಿಮಠಕ್ಕೆ ಗೃಹಸಚಿವ ಜಿ.ಪರಮೇಶ್ವರ್ ಅವರು ಸೋಮವಾರ ದಿಢೀರ್ ಭೇಟಿ ನೀಡಿ, ಕೋಡಿಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಶಾಸಕ ಹಾಗೂ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಸ್ಥಳೀಯ ಕಾಂಗ್ರೆಸ್ ಮುಖಂಡರು ಸೇರಿ ಯಾರಿಗೂ ಮಾಹಿತಿ ನೀಡದೇ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿರುವ ಕೋಡಿಮಠಕ್ಕೆ ದಿಢೀರ್ ಭೇಟಿ ನೀಡಿದ್ದಾರೆ.
ಮುಖ್ಯಮಂತ್ರಿ ಕುರ್ಚಿ ಕದನದ ವೇಳೆ ಕೋಡಿಮಠಕ್ಕೆ ಪರಮೇಶ್ವರ್ ಭೇಟಿ ನೀಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಜೊತೆ ಗೌಪ್ಯವಾಗಿ ಚರ್ಚೆ ನಡೆಸಿ, ಭವಿಷ್ಯ ಕೇಳಿ ವಾಪಾಸ್ ತೆರಳಿದ್ದಾರೆ ಎನ್ನಲಾಗಿದೆ.
ಸಚಿವರ ಭೇಟಿಯ ಕುರಿತು ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಅಥವಾ ಪೊಲೀಸ್ ಇಲಾಖೆಗೆ ಆಗಲಿ ಯಾವುದೇ ಮಾಹಿತಿ ನೀಡಲಾಗಿರಲಿಲ್ಲ ಎನ್ನುವುದು ವಿಶೇಷವಾಗಿದೆ. ರಾಜಕೀಯ ವಿಪ್ಲವ, ನೈಸರ್ಗಿಕ ವಿಕೋಪ, ಜಾಗತಿಕ ಆಗುಹೋಗುಗಳ ಬಗ್ಗೆ ಭವಿಷ್ಯ ನುಡಿಯುವ ಕೋಡಿಮಠದ ಶ್ರೀಗಳು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯಲಿದ್ದಾರಾ ಅಥವಾ ಇಲ್ಲವಾ ಎನ್ನುವುದರ ಬಗ್ಗೆಯೂ ಹಲವು ಬಾರಿ ಭವಿಷ್ಯವನ್ನು ನುಡಿದಿದ್ದರು.
