ಹಾಸನ: ಜಿಲ್ಲಾ ಕೇಂದ್ರದಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದ್ದು, ನಗರದ ರಿಂಗ್ ರಸ್ತೆಯಲ್ಲಿ ರೌಡಿಶೀಟರ್ ಜೆಸಿಬಿ ಮಂಜ ಎಂಬಾತನ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ನಗರದ ರಿಂಗ್ ರಸ್ತೆಯ ಬಾರ್ ಒಂದರ ಪಕ್ಕದಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿಗಳಾದ ಯೋಗಿಹಳ್ಳಿ ಗ್ರಾಮದ ರಾಜಿ ಮತ್ತು ಅಶೋಕ ಎಂಬುವವರು ಜೆಸಿಬಿ ಮಂಜನಿಗೆ ಫೋನ್ ಮಾಡಿ, ಯಾವುದೋ ವಿಷಯದ ಬಗ್ಗೆ ಮಾತನಾಡಬೇಕೆಂದು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಮಂಜ ಫುಟ್ಬಾತ್ ಮೇಲೆ ಮಾತನಾಡುತ್ತಾ ನಿಂತಿದ್ದ ವೇಳೆ, ಸಜ್ಜಾಗಿ ಬಂದಿದ್ದ ಸುಮಾರು 20ಕ್ಕೂ ಹೆಚ್ಚು ಪುಡಿರೌಡಿಗಳ ಗ್ಯಾಂಗ್ ದಿಢೀರ್ ಎಂದು ಅಟ್ಯಾಕ್ ಮಾಡಿದೆ. ದುಷ್ಕರ್ಮಿಗಳು ಭರ್ಜಿಯಿಂದ ಮಂಜನ ಕುತ್ತಿಗೆಗೆ ಚುಚ್ಚಿ ಕೊ* ಮಾಡಲು ಯತ್ನಿಸಿದ್ದಾರೆ?. ಆದರೆ, ಸಮಯಪ್ರಜ್ಞೆಯಿಂದ ಮಂಜ ತಕ್ಷಣವೇ ಪ್ರತಿಕ್ರಿಯಿಸಿದ್ದರಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಜೆಸಿಬಿ ಮಂಜನನ್ನು ತಕ್ಷಣವೇ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸ್ಥಳಕ್ಕೆ ಹಾಸನ ಬಡಾವಣೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆಯೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
