ಹಾಸನ: ಈಗಾಗಲೇ ಹಾಸನಾಂಬೆಯ ದರ್ಶನೋತ್ಸವ ಶುರುವಾಗಿದೆ. ಅ.9 ರಿಂದ ಅ.23ರ ವರೆಗಿರುವ ದೇವಿಯ ದರ್ಶನ ಮಾಡಲು ಜನರು ಎಲ್ಲೆಡೆಯಿಂದ ಬರುತ್ತಿದ್ದಾರೆ. ಸಾವಿರಾರು ಭಕ್ತರು ಮುಂಜಾನೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಒಂದು ವರ್ಷಕ್ಕೆ ಕೇವಲ ಒಂದೇ ಬಾರಿ ನೋಡಲು ಸಿಗುವ ತಾಯಿಯ ದರ್ಶನಕ್ಕೆ ಮೂರು ದಿನಗಳಿಂದ ಜನಸ್ತೋಮ ಹರಿದು ಬರುತ್ತಿದ್ದು, ವಾರಾಂತ್ಯದ ಸಮಯವಾದ್ದರಿಂದ ಇಂದು ಹೆಚ್ಚಿನ ಪ್ರಮಾಣದಲ್ಲಿಯೇ ಭಕ್ತರು ಆಗಮಿಸುವ ಸಾಧ್ಯತೆ ಇದೆ.

ಕೆಲವರು ಮಧ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ಕಾದು ನಿಂತಿದ್ದರು. ವೀಕೆಂಡ್ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಸಹಜವಾಗಿಯೇ ಹೆಚ್ಚುಗಿತ್ತು. 1 ಸಾವಿರ ಟಿಕಟ್‌ನ ಸಾಲು ಖಾಲಿ ಇದ್ದರೆ, 300 ರೂ. ವಿಶೇಷ ದರ್ಶನದ ಸರತಿ ಸಾಲು ಸಂಪೂರ್ಣ ಭರ್ತಿಯಾಗಿದ್ದವು.
ಸಚಿವ ಶಿವರಾಜ್ ತಂಗಡಗಿ, ಶಾಸಕ ಅರವಿಂದ್ ಬೆಲ್ಲದ್, ಸಂಸದ ಸುನೀಲ್ ಬೋಸ್, ನ್ಯಾಯಾಧೀಶರು ದೇವಿ ದರ್ಶನ ಪಡೆದರು. ಹಾಸನಾಂಬ ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಭೇಟಿ ನೀಡಿ ಧರ್ಮ ದರ್ಶನದ ಸಾಲು, 300 ರೂ ವಿಶೇಷ ದರ್ಶನದ ಸಾಲುಗಳನ್ನ ಪರಿಶೀಲಿಸಿದ್ರು. ದೇವಿ ದರ್ಶನಕ್ಕೆ ನಿಂತಿದ್ದ ಭಕ್ತರ ಬಳಿ ವ್ಯವಸ್ಥೆ ಬಗ್ಗೆ ವಿಚಾರಿಸಿದ್ರು.
ಅ.15 ರಂದು ಸಿಎಂ, ಡಿಸಿಎಂ ದರ್ಶನಕ್ಕೆ ಆಗಮಿಸುವ ಬಗ್ಗೆ ಮಾಹಿತಿ ಕೊಟ್ರು. ಈ ಮಧ್ಯೆ, ಒಂದೇ ದಿನಕ್ಕೆ 1 ಕೋಟಿ ಆದಾಯ ಬಂದಿದೆ.
