ಹಾಸನ: ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಹಾಸನಾಂಬ ಜಾತ್ರಾ ಮಹೋತ್ಸವವು ಸೋಮವಾರ ಬೆಳಿಗ್ಗೆ 5 ರಿಂದ ಮಂಗಳವಾರ ಬೆಳಗ್ಗೆ 5 ರ ಅವಧಿಯಲ್ಲಿ ಹಾಸನಾಂಬ ದೇವಾಲಯಕ್ಕೆ ದಾಖಲೆಯ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ತಿಳಿಸಿದ್ದಾರೆ.
ಸಕಾಲಿಕ ದರ್ಶನವನ್ನು ಖಚಿತಪಡಿಸಿಕೊಳ್ಳಲು ಬೆಳಗಿನ ಜಾವ 2 ರಿಂದ ಬೆಳಿಗ್ಗೆ 5 ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಶುಕ್ರವಾರದಿಂದ ಸೋಮವಾರ ರಾತ್ರಿಯವರೆಗೆ ಒಟ್ಟು 6.4 ಲಕ್ಷ ಜನರು ದರ್ಶನ ಪಡೆದಿದ್ದಾರೆ.
ಕಳೆದ ವರ್ಷ ಇದೇ ದಿನ 1.09 ಲಕ್ಷ ಜನರಿಗೆ ಹೋಲಿಸಿದರೆ ಪ್ರಸ್ತುತ 24 ಗಂಟೆಗಳಲ್ಲಿ 2.29 ಲಕ್ಷ ಜನರು ದರ್ಶನ ಪಡೆದಿದ್ದಾರೆ. ನಾಡಿನ ನಾನಾ ಭಾಗಗಳಿಂದ ಆಗಮಿಸುತ್ತಿರುವ ಸಹಸ್ರ ಸಂಖ್ಯೆಯ ಜನಸಾಮಾನ್ಯರನ್ನು ಸ್ವಾಗತಿಸಲು ನಮಗೆ ಸಂತೋಷವಾಗುತ್ತಿದೆ.
ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ರೈತರು ಮತ್ತು ಸಾಮಾನ್ಯ ಕಾರ್ಮಿಕ ಕುಟುಂಬಗಳು ಬರುತ್ತಿರುವುದು ಸಹ ಸಂತಸದ ವಿಚಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ಹಂಚಿಕೊಂಡಿದ್ದಾರೆ.
