ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇಂದು ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಏಕಾದಶಿ ಪ್ರಯುಕ್ತ ಉಪವಾಸದಲ್ಲಿದ್ದ ರೇವಣ್ಣ, ಹೊಳೆನರಸೀಪುರದ ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬರುವಾಗ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ಪಕ್ಕೆಲುಬಿಗೆ ಪೆಟ್ಟಾಗಿದ್ದು, ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ರೇವಣ್ಣ ಕುಟುಂಬ ಒಂದರ ಹಿಂದೆ ಒಂದರಂತೆ ಸಂಕಷ್ಟ ಎದುರಿಸುತ್ತಿದ್ದು, ಸಂಕಷ್ಟ ಪರಿಹಾರಕ್ಕಾಗಿ ರೇವಣ್ಣ ದೇವಾಲಯ ಸುತ್ತುತ್ತಿದ್ದಾರೆ. ಕೆ.ಆರ್.ನಗರ ಸಂತ್ರಸ್ತೆಯ ಕಿಡ್ನ್ಯಾಪ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ ರೇವಣ್ಣ ಸದ್ಯ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜೈಲಿನಿಂದ ಹೊರಬರ್ತಿದ್ದಂತೆ ರೇವಣ್ಣ ಟೆಂಪಲ್ ರನ್ ಶುರು ಮಾಡಿದ್ರು. ರಾಜ್ಯಾದ್ಯಂತ ಹಲವು ಪ್ರಸಿದ್ಧ ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಂತೆಯೇ ಇಂದು ಮನೆದೇವರಿಗೆ ಪೂಜೆ ಸಲ್ಲಿಸಿ ವಾಪಾಸ್ ಬರುವಾಗ ದೇವಸ್ಥಾನದಲ್ಲೇ ಕಾಲು ಜಾರಿ ಬಿದ್ದು ಆಸ್ಪತ್ರೆ ಸೇರಿದ್ದಾರೆ.