Sunday, August 3, 2025
!-- afp header code starts here -->
Homeಜಿಲ್ಲಾಸುದ್ದಿನಿರಂತರ ಮಳೆಯಿಂದ ಹೆದ್ದಾರಿ ಕಾಮಗಾರಿ ವಿಳಂಬ: ಸಂಸದ ಶ್ರೇಯಸ್ ಪಟೇಲ್

ನಿರಂತರ ಮಳೆಯಿಂದ ಹೆದ್ದಾರಿ ಕಾಮಗಾರಿ ವಿಳಂಬ: ಸಂಸದ ಶ್ರೇಯಸ್ ಪಟೇಲ್

ಸಕಲೇಶಪುರ: ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಾಮಗಾರಿಯ ವೇಗ ಕುಂಠಿತಗೊಂಡಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದ್ದಾರೆ.

ಪಟ್ಟಣದ ಕೆಂಪೇಗೌಡ ಪ್ರತಿಮೆ ಬಳಿಯಿಂದ ದೊಡ್ಡ ತಪ್ಪಲೆವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಮಗಾರಿಯನ್ನು ಜುಲೈ ಅಂತ್ಯದಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿತ್ತು. ಆದರೆ ಈ ಬಾರಿ ಮುಂಗಾರು ನಿರೀಕ್ಷಿತ ಸಮಯಕ್ಕಿಂತ ಒಂದು ತಿಂಗಳು ಮೊದಲೇ ಆರಂಭವಾದ ಕಾರಣ, ಯೋಜನೆಗಳು ತಡೆಗೊಳ್ಳಿದವು. ಹಲವು ಕಡೆ ಗುಡ್ಡ ಕುಸಿತದಿಂದ ಕಾಮಗಾರಿಗೆ ಅಡ್ಡಿಯಾಗಿದ್ದು, ಕೆಲಸದಲ್ಲಿ ವಿಳಂಬ ಉಂಟಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿಯೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಗುತ್ತಿಗೆದಾರರು ಯಾವುದೇ ಅಡಚಣೆ ಇಲ್ಲದೆ, ದಿನರಾತ್ರಿ ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು, ಕುಸಿಯುತ್ತಿರುವ ಗುಡ್ಡ ಪ್ರದೇಶಗಳಲ್ಲಿ ಸುಮಾರು ₹40 ಕೋಟಿ ವೆಚ್ಚದ ತಡೆಗೋಡೆ ಕಾಮಗಾರಿಗೆ ಈಗಾಗಲೇ ಟೆಂಡರ್ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಇದರಿಂದ ಶಾಶ್ವತ ಪರಿಹಾರ ಸಿಗುವ ಸಾಧ್ಯತೆ ಇದೆ ಎಂದರು.

ಮಾಜಿ ಸಚಿವ ನಾಗರಾಜ ಶೆಟ್ಟಿ ಮಾತನಾಡಿ, “ನಾನು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗಿನಿಂದ ಈ ರಸ್ತೆಯ ಕಾಮಗಾರಿ ಪೂರ್ಣಗೊಳಿಸಲು ಹಲವಾರು ಬಾರಿ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಗಳನ್ನು ಕರೆದರೂ ಫಲಿತಾಂಶ ಸಿಗಲಿಲ್ಲ. ಗುತ್ತಿಗೆದಾರರು ಇನ್ನೂ 13 ವರ್ಷ ಹಿಂದಿನ ದರದಂತೆ ಕಾಮಗಾರಿಯನ್ನು ಮುಂದುವರಿಸುತ್ತಿದ್ದು, ವಸ್ತುಗಳ ಬೆಲೆ ಏರಿಕೆಯ ಹಿನ್ನೆಲೆ ಈ ಕಾಮಗಾರಿಯ ಗುಣಮಟ್ಟಕ್ಕೂ ದುಪ್ಪಟ್ಟು ಪ್ರಭಾವ ಬೀರಿದೆ,” ಎಂದು ವಿಷಾದ ವ್ಯಕ್ತಪಡಿಸಿದರು.

ಈ ರಸ್ತೆಯ ವಿಳಂಬದಿಂದ ಮಂಗಳೂರು ಬಂದರಿನ ಶೇಕಡಾ 50ರಷ್ಟು ವಾಣಿಜ್ಯ ಚಟುವಟಿಕೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ರಾಜ್ಯದ ಪ್ರಮುಖ ವಸ್ತುಗಳು ಈಗ ಚೆನ್ನೈ ಮತ್ತು ಇತರ ಬಂದರುಗಳ ಮೂಲಕ ಸಾಗಾಟವಾಗುತ್ತಿದೆ. ಇದರಿಂದ ರಾಜ್ಯ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಬಂದರು ನಗರಿಯ ಸಂಪರ್ಕದ ಈ ರಸ್ತೆ ಸ್ಥಗಿತಗೊಂಡರೆ, ದಕ್ಷಿಣ ಕನ್ನಡ ಜಿಲ್ಲೆ ಬೆಳಕಿಲ್ಲದ ದೀಪದಂತೆ ರೂಪುಗೊಳ್ಳಲಿದೆ. ಹೀಗಾಗಿ ಈ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ರಾಜ್ಯ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ, ಮಧ್ಯವರ್ತಿ ಪಾತ್ರವಹಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ಅಧಿಕಾರಿ ಸೈಯದ್ ಅಮಾನುಲ್ಲಾ, ವ್ಯವಸ್ಥಾಪಕ ವಿಪಿನ್ ಶರ್ಮಾ, ತಹಶೀಲ್ದಾರ್ ಮೋಹನ್, ಕಾಂಗ್ರೆಸ್ ಮುಖಂಡರಾದ ಸೈಯದ್ ಮುಫೀಸ್, ಬೈಕೆರೆ ದೇವರಾಜ್, ಉದಯ್ ಹೆಚ್.ಎಚ್., ಕಲ್ಗನೆ ಪ್ರಶಾಂತ್, ಕಲ್ಗನೆ ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!