Friday, March 27, 2026
Homeಜಿಲ್ಲಾಸುದ್ದಿನನಗೆ ಜನರ ಸೇವೆ ಮಾಡುವ ಚಪಲ, ನಿಮಗೆ ಲೂಟಿ ಮಾಡುವ ಚಪಲ: ಕಾಂಗ್ರೆಸ್ ನಾಯಕರಿಗೆ ಹೆಚ್‌ಡಿಕೆ...

ನನಗೆ ಜನರ ಸೇವೆ ಮಾಡುವ ಚಪಲ, ನಿಮಗೆ ಲೂಟಿ ಮಾಡುವ ಚಪಲ: ಕಾಂಗ್ರೆಸ್ ನಾಯಕರಿಗೆ ಹೆಚ್‌ಡಿಕೆ ಟಾಂಗ್!

ಬೆಂಗಳೂರು: “ನನಗೆ ಜನರ ಸೇವೆ ಮಾಡುವ ಹಂಬಲವಿದ್ದರೆ, ಕೆಲವರಿಗೆ ಲೂಟಿ ಮಾಡುವ ಚಪಲವಿದೆ” ಎಂದು ಹೇಳುವ ಮೂಲಕ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಮಾರ್ಮಿಕವಾಗಿ ಪ್ರತ್ಯುತ್ತರ ನೀಡಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಮೇಲಿನ ವೈಯಕ್ತಿಕ ಟೀಕೆಗಳಿಗಿಂತ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ತಮಗೆ ಮುಖ್ಯ ಎಂದು ತಿಳಿಸಿದರು. ಸರ್ಕಾರದ ಅಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದನ್ನು ಬಾಯಿ ಚಪಲ ಎಂದು ಕರೆಯುವುದು ಸರಿಯಲ್ಲ, ಅದು ಜನರೊಂದಿಗಿನ ತಮ್ಮ ಸಂಬಂಧದ ಭಾಗ ಎಂದರು.

ಉಪ ಮುಖ್ಯಮಂತ್ರಿಗಳು ಸ್ವಜಾತಿಯವರಿಂದಲೇ ಅನ್ಯಾಯವಾಗುತ್ತಿದೆ ಎಂದು ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಷ್ಟ ಬಂದಾಗ ಮಾತ್ರ ಇವರಿಗೆ ಜಾತಿ ನೆನಪಾಗುತ್ತದೆ ಎಂದು ಲೇವಡಿ ಮಾಡಿದರು. ಪ್ರತಿನಿಧಿಸುವ ಜಾತಿಗೆ ಇವರು ಏನು ಮಾಡಿದ್ದಾರೆ? ಬೆಳಿಗ್ಗೆಯಿಂದ ಸಂಜೆಯವರೆಗೆ ಹಣ ಹೊಡೆಯುವುದೇ ಇವರ ಕೆಲಸವಾಗಿದೆ. ರಾಜ್ಯವನ್ನು ಲೂಟಿ ಮಾಡುವ ಇಂತಹ ವ್ಯಕ್ತಿಗಳಿಗೆ ಜನರು ಜಾತಿ ಹೆಸರಿನಲ್ಲಿ ಬೆಂಬಲ ನೀಡುತ್ತಾರೆಯೇ ಎಂದು ಅವರು ಖಾರವಾಗಿ ಪ್ರಶ್ನಿಸಿದರು. ದಿನಬೆಳಗಾದರೆ ಯಾರ ತಲೆ ಹೊಡೆಯಬೇಕು, ಯಾರ ಜಮೀನಿಗೆ ಬೇಲಿ ಹಾಕಬೇಕು ಎನ್ನುವವರಿಗೆ ಜಾತಿಯ ಶ್ರೀರಕ್ಷೆ ಸಿಗುವುದಿಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ಜೆಡಿಎಸ್ ಅಸ್ತಿತ್ವದ ಬಗ್ಗೆ ಮಾತನಾಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧವೂ ಕಿಡಿಕಾರಿದ ಹೆಚ್‌ಡಿಕೆ, ಕಾಂಗ್ರೆಸ್ ಮೊದಲು ರಾಷ್ಟ್ರಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ನಿಮ್ಮ ಪಕ್ಷದ ಪರಿಸ್ಥಿತಿ ಏನಾಗಿದೆ ಎಂಬುದನ್ನು ಗಮನಿಸಿ ಎಂದರು. ಕಾಂಗ್ರೆಸ್‌ನಲ್ಲಿರುವ ಅರ್ಧದಷ್ಟು ಮಂತ್ರಿಗಳು ಮತ್ತು ಸ್ವತಃ ಮುಖ್ಯಮಂತ್ರಿಗಳು ಕೂಡ ಜೆಡಿಎಸ್‌ನಿಂದ ಲೀಸ್ ಮೇಲೆ ಹೋದವರು, ಈ ಬಗ್ಗೆ ಪ್ರಿಯಾಂಕ್ ತಮ್ಮ ತಂದೆಯವರನ್ನೇ ಕೇಳಿ ತಿಳಿದುಕೊಳ್ಳಲಿ ಎಂದು ಟಾಂಗ್ ನೀಡಿದರು.

ಕಾಂಗ್ರೆಸ್ ಪಕ್ಷದ ಆಂತರಿಕ ಕಲಹದ ಬಗ್ಗೆ ಪ್ರಸ್ತಾಪಿಸಿದ ಅವರು, ಸದ್ಯಕ್ಕೆ ಅಲ್ಲಿ ಒಬ್ಬರ ಲೀಸ್ ಅವಧಿ ಮುಗಿದಿದೆ ಮತ್ತು ಮತ್ತೊಬ್ಬರು ಸಿಎಂ ಸ್ಥಾನಕ್ಕಾಗಿ ಟವೆಲ್ ಹಾಕಿದ್ದಾರೆ ಎಂದು ಲೇವಡಿ ಮಾಡಿದರು. ಖರ್ಗೆ ಕುಟುಂಬ ದಶಕಗಳಿಂದ ಅಧಿಕಾರದಲ್ಲಿದ್ದರೂ ತಮ್ಮ ಕ್ಷೇತ್ರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿದ ಅವರು, ರಾಮನಗರ ಮತ್ತು ಮೈಸೂರು ಭಾಗದ ಅಭಿವೃದ್ಧಿ ಕಾರ್ಯಗಳನ್ನು ಪಟ್ಟಿ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಿಂದಾಗಿ ಕಾಂಗ್ರೆಸ್ 9 ಸ್ಥಾನಗಳಿಗೆ ಕುಸಿಯಿತು, ಇಲ್ಲದಿದ್ದರೆ ಅದು 3ಕ್ಕೇ ಇಳಿಯುತ್ತಿತ್ತು ಎಂದು ಅವರು ಪ್ರತಿಪಾದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!