ಚಿಕ್ಕಮಗಳೂರು : ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕಡೂರು ಎಮ್ಮೆದೊಡ್ಡಿ ಅರಣ್ಯ ಭೂಮಿ ಒತ್ತುವರಿಯನ್ನು ಬೆಳ್ಳಂ ಬೆಳಿಗ್ಗೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಿದ್ದಾರೆ.

ಕಡೂರು ಪುರಸಭೆ ಮುಖ್ಯಾಧಿಕಾರಿ ಆಗಿದ್ದ ಮಂಜುನಾಥ್ ಅಕ್ರಮವಾಗಿ ಒತ್ತುವರಿ ಮಾಡಿದ್ದ 10 ಎಕರೆ ಅರಣ್ಯ ಭೂಮಿಯನ್ನು ಜೆಸಿಬಿಗಳ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಬಡವರಿಗೊಂದು ಬಲಿಷ್ಠರಿಗೊಂದು ಕಾನೂನು ಎಂದು ನಿನ್ನೆ ನಡೆದ ಕೆಡಿಪಿ ಸಭೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಎಂಎಲ್.ಸಿ ಎಸ್ಎಲ್ ಭೋಜೇಗೌಡ ಕೆಂಡಾಮಂಡಲ ಆಗಿದ್ರು. ಈ ವೇಳೆ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಕೂಡಲೇ ತೆರವುಗೊಳಿಸುವಂತೆ ಡಿ.ಎಫ್.ಓ ಗೆ ಸೂಚಿಸಿದ್ದರು.

ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಇಂದು ಬೆಳಿಗ್ಗೆ 6 ಗಂಟೆಗೆ ಪೊಲೀಸರ ಜೊತೆಗೆ ಜಂಟಿ ಕಾರ್ಯಾಚರಣೆ ಕೈಗೊಂಡರು. ಎಮ್ಮೆದೊಡ್ಡಿ ಸರ್ವೆ ನಂಬರ್ 70 ರಲ್ಲಿ ಒಟ್ಟು10 ಎಕರೆಯಲ್ಲಿ ನಿರ್ಮಿಸಿದ್ದ ಮನೆ, ಕುರಿಶೆಡ್, ಕೋಳಿ ಶೆಡ್ ಕೃಷಿ ಹೊಂಡ ಸೇರಿದಂತೆ ಹೊಲವನ್ನು ಜೆಸಿಬಿ ಮೂಲಕ ನೆಲಕ್ಕುರುಳಿಸಲಾಯಿತು. ಎಸಿಎಫ್ ಮೋಹನ್ ಕಡೂರು ಆರ್.ಎಫ್ಓ ರಜಾಕ್ ರದಾಫ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಕಡೂರು ಪೊಲೀಸರು ಹಾಜರಿದ್ದರು.