ಹಾಸನ: ಜಿಲ್ಲೆಯಲ್ಲಿ ಪುಂಡಪೋಕರಿಗಳ ಹಾವಳಿ ಮತ್ತೆ ಮಿತಿಮೀರುತ್ತಿದ್ದು, ಶಾಲೆಯಿಂದ ಮನೆಗೆ ಮರಳುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪರಿಚಿತ ಯುವಕನೊಬ್ಬ ಹಿಂಬಾಲಿಸಿ ಕಿರುಕುಳ ನೀಡಿರುವ ಆತಂಕಕಾರಿ ಘಟನೆ ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿ, ಸಂಜೆ ಶಾಲಾ ವಾಹನದಲ್ಲಿ ಮನೆಗೆ ಮರಳಿದ್ದಾಳೆ. ವಾಹನದಿಂದ ಇಳಿದು ಬಾಲಕಿ ತನ್ನ ಮನೆಯತ್ತ ನಡೆದು ಹೋಗುತ್ತಿದ್ದಾಗ, ಬೈಕ್ ಅಥವಾ ಕಾಲ್ನಡಿಗೆಯಲ್ಲಿ ಹಿಂಬಾಲಿಸಿದ ಅಪರಿಚಿತ ಯುವಕನೊಬ್ಬ ಅವಳನ್ನು ಸತತವಾಗಿ ಫಾಲೋ ಮಾಡಿದ್ದಾನೆ.ಮನೆಯ ಗೇಟ್ ಬಳಿ ಬರುತ್ತಿದ್ದಂತೆ ಯುವತಿಯ ಹತ್ತಿರ ಸುಳಿಯಲು ಯತ್ನಿಸಿದ್ದಾನೆ. ಇದರಿಂದ ಗಾಬರಿಗೊಂಡ ಬಾಲಕಿ ಜೋರಾಗಿ ಓಡಿಬಂದು ಮನೆ ಗೇಟ್ ಒಳ ಸೇರಿದ್ದಾಳೆ ,ಆದರೂ ಎದರದ ಪುಂಡ ಯುವಕ, ಗೇಟ್ ಬಳಿಯೇ ನಿಂತು ಬಾಲಕಿಗೆ ವಿಕೃತಿ ಮೆರೆದಿದ್ದಾನೆ.
ಯುವಕನ ವರ್ತನೆಯಿಂದ ಆತಂಕಗೊಂಡರೂ ಧೈರ್ಯ ಕಳೆದುಕೊಳ್ಳದ ಬಾಲಕಿ, ಮನೆಯ ಗೇಟ್ ಬಳಿಯೇ ನಿಂತು ಅವನನ್ನು ಪ್ರತಿರೋಧಿಸಿದ್ದಾಳೆ. ಬಾಲಕಿಯ ಕಿರುಚಾಟ ಮತ್ತು ಪ್ರತಿರೋಧವನ್ನು ಕಂಡು ಸಾರ್ವಜನಿಕರು ಜಮಾಯಿಸುವ ಭೀತಿಯಿಂದ ಪುಂಡ ಅಲ್ಲಿಂದ ಕಾಲ್ಕಿತ್ತಿದ್ದಾನೆ ,
ಈ ಇಡೀ ಘಟನೆಯ ದೃಶ್ಯಾವಳಿಗಳು ಮನೆಯ ಮುಂಭಾಗ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಯುವಕ ಬಾಲಕಿಯನ್ನು ಹಿಂಬಾಲಿಸಿಕೊಂಡು ಬರುವುದು ಮತ್ತು ಗೇಟ್ ಬಳಿ ನಿಂತು ವರ್ತಿಸುವ ದೃಶ್ಯಗಳು ವಿಡಿಯೋದಲ್ಲಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೋಷಕರಲ್ಲಿ ಆತಂಕ: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಇಂತಹ ಪುಂಡರ ಕಾಟ ಹೆಚ್ಚಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಸುರಕ್ಷತೆಗೆ ಪೊಲೀಸರು ಹೆಚ್ಚಿನ ಗಸ್ತು ನಿಯೋಜಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ
