ಕೊಪ್ಪ: ಕಾಡಾನೆ ದಾಳಿಯಿಂದ ವಾರದಲ್ಲಿ ಎರಡು ಸಾವಾಗಿದೆ, ಕಾಡಾನೆಗಳನ್ನು ಜನವಸತಿ ಪ್ರದೇಶಗಳಿಂದ ಓಡಿಸಲು ಯಾವ ಕ್ರಮ ಕೈಗೊಂಡಿದ್ದೀರಾ ಹಾಗೆಯೇ, ಅಕ್ರಮವಾಗಿ ಬೀಟೆ ಹಾಗೂ ಸಾಗುವಾನಿ ಮರ ಕಡಿದವರಏನು ಕ್ರಮ ಜರುಗಿಸಿದ್ದೀರ ಎಂದು ಪ್ರಶ್ನಿಸಿದಕ್ಕೆ ಕೊಪ್ಪ ತಾಲೂಕಿನ ಆರ್ ಎಫ್ ಒ ರಂಗನಾಥ್ ನೀನ್ಯಾರು ಇದನ್ನು ಕೇಳಲು ಎಂಬ ಉಡಾಫೆ ಉತ್ತರ ನೀಡಿದ್ದು, ಸಾರ್ವಜನಿಕರು ಸರ್ಕಾರಿ ಅಧಿಕಾರಿಗಳನ್ನು ಪ್ರಶ್ನಿಸುವುದು ಅಪರಾಧವೇ? ಇಂತಹ ಅಧಿಕಾರಿಗಳಿಂದಲೇ ರೈತರು ಸಮಸ್ಯೆ ಎದುರಿಸುವಂತಾಗಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡ ಕೆ.ಎಲ್. ಅಶೋಕ್ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಲೆನಾಡಿನ ಭಾಗದಲ್ಲಿ ನಿರಂತರ ಕಾಡಾನೆ ದಾಳಿಯಿಂದ ರೈತರು ಬೆಳೆದಿರುವ ಬೆಳೆಗಳು ಹಾಗೆಯೇ, ಜನರ ಪ್ರಾಣ ಹಾನಿಯಾಗುತ್ತಿದೆ. ಕೊಪ್ಪ ಪಟ್ಟಣದ ಸಮೀಪದಲ್ಲಿಯೇ ಇರುವ ಕುಂಚೂರು, ಅಂದಗಾರು ಜನವಸತಿ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಕಾಡಾನೆಯೊಂದು ಸುತ್ತಾಡುತ್ತಿದ್ದು, ಇದನ್ನು ಓಡಿಸುವಲ್ಲಿ ಕೊಪ್ಪ ವಲಯ ಅರಣ್ಯಾಧಿಕಾರಿ ರಂಗನಾಥ್ ನಿರ್ಲಕ್ಷ್ಯ ತೋರಿದ್ದಾರೆ. ಕಳೆದ ವಾರ ಬಾಳೆಹೊನ್ನೂರು ಸಮೀಪದ ಬನ್ನೂರಿನಲ್ಲಿ ಕೂಲಿ ಕಾರ್ಮಿಕ ಮಹಿಳೆ ಅನಿತಾ ಹಾಗೂ ನೆನ್ನೆ ಅಲ್ಲಿಗೆ ಸಮೀಪದ ಅಂಡವಾನೆಯಲ್ಲಿ ರೈತ ಸುಬ್ರಾಯಗೌಡ ಆನೆ ದಾಳಿಗೆ ಪ್ರಾಣ ತೆತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ.
ಹಾಗೆಯೇ ಕಳೆದ ವಾರದ ಕೊಪ್ಪ ಅರಣ್ಯವಲಯದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗುವಾನಿ, ಬೀಟೆ ಮರ ಕಡಿದು ಸಾಗಾಟ ಮಾಡಿದ ಪ್ರಕರಣ ದಾಖಲಾಗಿದ್ದರೂ, ಆರೋಪಿಗಳನ್ನ ಇದುವರೆಗೆ ಬಂಧಿಸದೆ, ಕುಂಟು ನೆಪಗಳನ್ನು ಕೊಟ್ಟು, ಆರೋಪಿಗಳನ್ನು, ರಕ್ಷಿಸಿ, ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಈ ವಿಚಾರವಾಗಿ ಕೊಪ್ಪ ಆರ್ ಎಫ್ ಒ ರಂಗನಾಥ್ ಅವರೊಂದಿಗೆ ಪ್ರಶ್ನಿಸಿದಾಗ ಉಡಾಫೆಯಿಂದ ಮಾತಾಡಿದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗೆ ದಾಖಲೆ ಸಮೇತ ದೂರು ನೀಡಿದ್ದೇನೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ಮುಖಂಡ ಕೆ.ಎಲ್ ಅಶೋಕ್ ತಿಳಿಸಿದ್ದಾರೆ.