ಜಯಪುರ: ಮಲೆನಾಡ ಈ ಭಾಗಕ್ಕೆ ಹರಿಕಥೆಯನ್ನು ಪರಿಚಯಿಸಿದ, ಲಾವಣಿ ಬರವಣಿಗೆಯ ಮೂಲಕ ಜನಜಾಗೃತಿ ಮೂಡಿಸಿದ ಅಪರೂಪದ ವ್ಯಕ್ತಿ ಜಾಲ್ಮರ ಸುಬ್ರಾವ್ ಆಗಿದ್ದು, ಅಂತಹವರನ್ನು 10ನೇ ಕೊಪ್ಪ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ತೀರ್ಮಾನ ಅತ್ಯಂತ ಸಮರ್ಥ ವಾದುದಾಗಿದೆ ಎಂದು ಸಾಮಾಜಿಕ ಮುಖಂಡ ಸುಧೀರ್ ಕುಮಾರ್ ಮುರೋಳ್ಳಿ ಹೇಳಿದರು.
ಗುಡ್ಡೇತೋಟ ಗ್ರಾಮ ಪಂಚಾಯ್ತಿ ಜಾಲ್ಮರದಲ್ಲಿ ಮಂಗಳವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹರಿಕಥೆ ವಿದ್ವಾಂಸ ಜಾಲ್ಮರ ಸುಬ್ರಾವ್ 80ರ ದಶಕದಲ್ಲೇ ಮಲೆನಾಡಿನ ಮನೆ ಮನೆಗಳಲ್ಲಿ ಮನೆ ಮಾತಾಗಿದ್ದವರು. ಅಂತವರ ಅಧ್ಯಕ್ಷತೆಯಲ್ಲಿ 10ನೇ ಕೊಪ್ಪ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.
ಎಲ್ಲಾ ಸ್ಥರದ, ಎಲ್ಲಾ ಜಾತಿಗಳ, ಎಲ್ಲಾ ಧರ್ಮಗಳನ್ನೊಳಗೊಂಡ ಸಾಹಿತ್ಯಾಭಿಮಾನಿಗಳನ್ನು ಒಳಗೊಂಡ ಸಮ್ಮೇಳನ ಇದಾಗಲಿ, ಮಲೆನಾಡಿನ ಸಾಂಸ್ಕೃತಿಕ ಚಿಂತನೆಗಳನ್ನೊಳಗೊಂಡ ಚಿಂತನಾ ಘೋಷ್ಠಿಗಳು ನಡೆಯಲಿ, ಬಸರೀಕಟ್ಟೆಯ ಶ್ರೀ ಜನಾರ್ದನ ಸ್ವಾಮಿ, ಮೇಗೂರು ಲಕ್ಷ್ಮೀ ವೆಂಕಟರಮಣ ಸ್ವಾಮಿ, ಮೇಗುಂದಾ ಬಸದಿಯ ತೀರ್ಥಂಕರರು ಸೇರಿದಂತೆ ಎಲ್ಲರ ಆಶೀರ್ವಾದದ ಮೂಲಕ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದರು.
ಸ್ವಾಗತ ಸಮಿತಿಯ ಅಧ್ಯಕ್ಷ ನಾರಾಯಣ ಬೆಂಡೆಹಕ್ಲು ಮಾತನಾಡಿ, ಜನವರಿ 17 ಮತ್ತು 18ರಂದು ಕೊಗ್ರೆಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಾಭಿಮಾನಿಗಳು ಬಿಡುವು ಮಾಡಿಕೊಂಡು ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕಸಾಪ ಕೊಪ್ಪ ತಾಲ್ಲೂಕು ಅಧ್ಯಕ್ಷ ಹರ್ಷ, ಸ್ವಾಗತ ಸಮಿತಿಯ ವೇಣುಗೋಪಾಲ್, ಸಂಚಾಲಕರುಗಳಾದ ಕಿಬ್ಳಿ ಪ್ರಸನ್ನ ಕುಮಾರ್, ಕೀರ್ತಿರಾಜ್, ರಾಜೇಶ್, ಬಿಇಒ ರಾಘವೇಂದ್ರ, ದೇವೇಂದ್ರ ಜಾಲ್ಮರ, ಪ್ರಶಾಂತ್ ಜಾಲ್ಮರ, ಜಗದೀಶ್, ರಮೇಶ್, ದಿನೇಶ್, ನಾಗರಾಜ್ ಪವಾರ್, ಅಣ್ಣಯ್ಯ, ಚಂದ್ರಕಲಾ ಹಾಗೂ ಇತರರಿದ್ದರು.
