ಜಯಪುರ: 2026ರ ಜನವರಿ 18 ರಂದು ಕೊಗ್ರೆಯಲ್ಲಿ ನಡೆಯಲಿರುವ 10ನೇ ಕೊಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸ್ವಾಗತ ಸಮಿತಿ ಅಧ್ಯಕ್ಷ ಬಿ.ಆರ್.ನಾರಾಯಣ್ ಬೆಂಡೆಹಕ್ಲು ಜಯಪುರದಲ್ಲಿ ಬಿಡುಗಡೆಗೊಳಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷ ಬಿ.ಆರ್.ನಾರಾಯಣ ಮಾತನಾಡಿ, ಅಪ್ಪಟ ಮಲೆನಾಡಿನಲ್ಲಿ ನಡೆಯುತ್ತಿರುವ ಈ ಸಮ್ಮೇಳನದ ಅಧ್ಯಕ್ಷರಾಗಿ ಹರಿಕಥಾ ಕೀರ್ತನಕಾರ ಜಾಳ್ಮರ ಸುಬ್ಬರಾವ್ ಆಯ್ಕೆಯಾಗಿದ್ದು, ಇದೊಂದು ಐತಿಹಾಸಿಕವಾಗಿ ದಾಖಲಾಗಲು ಎಲ್ಲರೂ ಕೈ ಜೋಡಿಸಿ ಎಂದು ಕರೆ ನೀಡಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಎಂ.ಶ್ರೀಹರ್ಷ ಮಾತನಾಡಿ, ತಾಲ್ಲೂಕು ಸಮ್ಮೇಳನವನ್ನು ಕೊಗ್ರೆಯಲ್ಲಿ ವಿಶಿಷ್ಟವಾಗಿ ನಡೆಸುವ ಉದ್ದೇಶದಿಂದ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಹರಿಕಥೆ ವಿದ್ವಾಂಸ ಜಾಳ್ಮಾರ್ ಸುಬ್ಬರಾವ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದು ಒಂದೆರಡು ದಿನದಲ್ಲೇ ಅವರನ್ನು ಗೌರವಪೂರ್ವಕವಾಗಿ ಆಹ್ವಾನಿಸಲಾಗುವುದು ಎಂದರು.

ಒಂದು ದಿನದ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ. ಕೃಷಿ, ಜಾನಪದ ಹಾಗೂ ನೂರು ವರ್ಷ ತುಂಬಿದ ನಾಡಗೀತೆ ಸೇರಿದಂತೆ ಮೂರು ಗೋಷ್ಠಿಗಳಿವೆ. ಎಂದಿನಂತೆ ಕವಿಗೋಷ್ಠಿಯ ಬದಲಾಗಿ ಪ್ರತಿ ಗೋಷ್ಠಿಯ ನಿರ್ವಹಣಾ ಅವಧಿಯಲ್ಲಿ ಕವಿಗಳಿಗೆ ಅವಕಾಶ ನೀಡಲಾಗುವುದು. ಸಮ್ಮೇಳನಕ್ಕೆ ಸುಮಾರು ೧೦ ಲಕ್ಷ ವೆಚ್ಚ ತಗಲಬಹುದಾದ ನಿರೀಕ್ಷೆಯಿದೆ.ಲಾಂಛನ ಸ್ಥಳೀಯವಾದ ಪಂಚಮಿಕಲ್ಲು,ಮೇರುತಿ ಪರ್ವತ ಬಿಂಬಿಸುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಗುರುತರ ಸಾಧನೆ ಮಾಡಿದ ಹುಲ್ಸೆಯ ದಿ.ಹು.ವಾ.ಶ್ರೀವತ್ಸ, ಚಾರನಕೊಡಿಗೆ ಸುಬ್ಬರಾವ್, ಸಮ್ಮೇಳನದ ಸ್ಥಳ ದಾನಿ ದಿ.ರಾಮೇಗೌಡ ಮತ್ತಿತರ ಮಹನೀಯರ ಹೆಸರಲ್ಲಿ ದ್ವಾರಗಳನ್ನು ತೆರೆಯಲಾಗುವುದು. ಸ್ವಾಗತ ಸಮಿತಿ ರಚಿಸಿದ್ದು, ೧೨ ಉಪ ಸಮಿತಿಗಳನ್ನು ರಚಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂರು ಹೋಬಳಿಗಳಿಂದ ತಲಾ 3 ರಂತೆ 9 ಜನರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಗುವುದು. ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪಂಚಾಯಿತಿಗೊಬ್ಬರಂತೆ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದು, ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದರು.
ಸಮ್ಮೇಳನದಲ್ಲಿ ಯುವಕವಿ ಡಾ.ಸಿ.ಸುಬ್ರಹ್ಮಣ್ಯ, ಚಾವಲ್ಮನೆ ಸತೀಶ್, ಹೊಸಕೊಪ್ಪ ಸುಬ್ಬಣ್ಣ, ಹರಿಹರಪುರ ಸಮ್ಮೇಳನದ ಸ್ಮರಣ ಸಂಚಿಕೆ, ಹರಿಹರಪುರ ರೋಟರಿ ಸಮುದಾಯ ದಳದ ಮರೆಯಲಾಗದ ಮಾಣಿಕ್ಯ ಕೃತಿ ಮರು ಬಿಡುಗಡೆಗೊಳಿಸಲಾಗುವುದು. ಈವರೆಗೂ ಮಂಡಿಸಿದ ಯಾವುದೇ ನಿರ್ಣಯಗಳೂ ಕಾರ್ಯರೂಪಗೊಳ್ಳದಿರುವುದು ವಿಷಾಧನೀಯವಾಗಿದೆ. ಈ ಭಾಗದ ಮಲೆನಾಡಿನ ಜ್ವಲಂತ ಸಮಸ್ಯೆ, ರಾಷ್ಟ್ರಕವಿ ಕುವೆಂಪು, ಮಾಜಿ ಶಿಕ್ಷಣ ಸಚಿವ ದಿ.ಗೋವಿಂದೇಗೌಡ ಅಧ್ಯಯನ ಕೇಂದ್ರ ತೆರೆಯಬೇಕು. ಸರಕಾರಿ ಶಾಲೆಗಳು ಮುಚ್ಚದೆ ಖಾಸಗಿ ಶಾಲೆಗಳು ಶಾಶ್ವತವಾಗಿ ಉಳಿದುಕೊಳ್ಳುವಂತೆ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಸಂಪನ್ಮೂಲ ಸಮಿತಿ ಅಧ್ಯಕ್ಷ ಕೆ.ಎಸ್.ರವೀಂದ್ರ, ಸಂಚಾಲಕರುಗಳಾದ ಕಿಬ್ಳಿ ಪ್ರಸನ್ನಕುಮಾರ್, ಕೀರ್ತಿರಾಜ್ , ಹೋಬಳಿ ಅಧ್ಯಕ್ಷ ಸಿ.ವಿ.ರಾಜೇಶ್ ಚಿಮ್ಮನಕೊಡಿಗೆ, ಆಹಾರ ಸಮಿತಿ ಅಧ್ಯಕ್ಷ ಜೆ.ಎಸ್.ಪ್ರಶಾಂತ್, ಮುಖಂಡರಾದ ಕೊಪ್ಪದ ನಾಗರಾಜ್ ಪವಾರ್, ಸುಖೇಶ್, ಜಿನೇಶ್ ಇರ್ವತ್ತೂರು, ಹುಲ್ಸೆ ಪ್ರಶಾಂತ, ಕಾರ್ತಿಕ್ ಉಪಸ್ಥಿತರಿದ್ದರು.
ವರದಿ: ಶಶಿ ಬೆತ್ತದಕೊಳಲು
