ಜಯಪುರ : ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾದ ಗವಾಯಿಯವರ ಮೇಲೆ ಎಸೆದಿರುವ ಬೂಟು ಕೇವಲ ನ್ಯಾಯಾಮೂರ್ತಿಗಳಿಗೆ ಮಾಡಿದ ಅಪಚಾರವಲ್ಲ, ಅದು ದೇಶದ ಸಂವಿಧಾನಕ್ಕೆ ಮಾಡಿರುವ ಅಪಚಾರವಾಗಿದ್ದು, ಸಂವಿಧಾನದ ಮೇಲಿನ ಅಸಹನೆ, ದಲಿತ ನ್ಯಾಯಾಧೀಶರ ಮೇಲಿನ ಅಸಹನೆ ಮತ್ತು ಮನುವಾದಿ ಸಂಘಿಗಳ ಮಾನಸಿಕ ದೀವಾಳಿತನದ ನಿದರ್ಶನವಿದು. ಇದನ್ನು ನಾವೆಲ್ಲರೂ ಖಂಡಿಸುವ ಜೊತೆಗೆ ದೇಶದ ಸಂವಿಧಾನದ ರಕ್ಷಣೆಗೆ ಮುಂದಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ಜಯಪುರದಲ್ಲಿ ಭಾನುವಾರ ಕರ್ನಾಟಕ ಜನಶಕ್ತಿ ಸಂಘಟನೆ ಆಯೋಜಿಸಿದ್ದ ಪ್ರತಿಭಟನಾ ಸಭೆ ಪಂಜಿನ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಕಾನೂನಿನಲ್ಲಿ ಅವಕಾಶವಿಲ್ಲದ ಪ್ರಕರಣವನ್ನು ಮಾನ್ಯ ನ್ಯಾಯಮೂರ್ತಿಗಳು ವಜಾ ಗೊಳಿಸಿದ್ದಕ್ಕೆ ಬೂಟು ಎಸೆಯುವಂತ ಹೇಯ ಕೃತ್ಯ ಎಸಗಲಾಗಿದ್ದು ಇದರ ಹಿಂದೆ ಗೋಡ್ಸೆ ಬೆಂಬಲಿಗ ಸಂಘಟನೆಯ ಕೈವಾಡವಿದೆ. ಗಾಂಧಿ, ಬಸವ, ಬುದ್ಧ ಹಾಗೂ ಕುವೆಂಪುರವರ ರಕ್ತ ಹಂಚಿಕೊಂಡ ನಾವೆಲ್ಲ ಗೋಡ್ಸೆ ಬೆಂಬಲಿಗ ದೇಶ ವಿರೋಧಿಗಳ ವಿರುದ್ದ ಸಮಾಜ ಜಾಗೃತಿಯ, ಸಂವಿಧಾನ ಸಂರಕ್ಷಣೆಯ ಕಾರ್ಯ ಮಾಡಬೇಕಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಕಲ್ಕುಳಿ ವಿಠಲಹೆಗ್ಡೆ ಮಾತನಾಡಿ, ಇದೊಂದು ಪೂರ್ವ ಯೋಜಿತ ಕೃತ್ಯವಾಗಿದೆ, ಆರ್ಎಸ್ಎಸ್ 100ನೇ ವರ್ಷಾಚಾರಣೆಯ ಕಾರ್ಯಕ್ರಮಕ್ಕೆ ಹೋಗದ ನ್ಯಾಯಮೂರ್ತಿಗಳ ತಾಯಿಯ ಮೇಲಿನ ಸಿಟ್ಟಿಗೆ ದಲಿತ ಸಮುದಾಯದ ನ್ಯಾಯಮೂರ್ತಿಗಳ ಮೇಲೆ ಬೂಟು ಎಸೆಯಲಾಗಿದೆ. ಈ ದೇಶದ ಕೇಂದ್ರ ಸರ್ಕಾರ ಇಂತಹ ಸಂವಿಧಾನ ವಿರೋಧಿಗಳ ಆಟಾಟೋಪಕ್ಕೆ ಕುಮ್ಮಕ್ಕು ನೀಡುತ್ತಿರುವುದು, ದೇಶದಲ್ಲಿನ ಅರಾಜಕತೆಗೆ ಕಾರಣವಾಗಿದೆ. ನಾವೆಲ್ಲ ಸಂಘಟಿತರಾಗಿ ಇಂತಹ ಸಂವಿಧಾನ ವಿರೋಧಿಗಳ ಹುಟ್ಟಡಗಿಸುವ ಅನಿವಾರ್ಯತೆಯಿದ್ದು, ದೇವರ ಹೆಸರಿನಲ್ಲಿ ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರಿಂದ ನಮ್ಮ ಅಮಾಯಕ ಯುವ ಸಮುದಾಯವನ್ನು ರಕ್ಷಿಸಬೇಕು ಎಂದರು.
ಜನಶಕ್ತಿ ಸಂಘಟನೆಯ ಹರೀಶ್, ಕೌಳಿ ರಾಮು, ಇಸ್ಮಾಯಿಲ್, ಡಿಎಸ್ಎಸ್ ನ ರಾಜಶಂಕರ್, ಆನಂದ್, ಸುರೇಶ್, ಮುಖಂಡರಾದ ಕುಕ್ಕುಡಿಗೆ ರವಿಂದ್ರ, ಅನಿಲ್ ಹೊಸಕೊಪ್ಪ, ಕೀರ್ತಿರಾಜ್, ಅನಿಲ್ ಡಿಮೆಲ್ಲೋ, ಹಾಗಲಗಂಚಿ ವೆಂಕಟೇಶ್, ಸುರೇಶ್ ಇತರರಿದ್ದರು.
