ಜಯಪುರ: ಚಿಕ್ಕಮಗಳೂರು ಜಿಲ್ಲೆಯ ಜಯಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಿಡಾಡಿ ಜಾನುವಾರುಗಳ ಸಂಖ್ಯೆ ಹೆಚ್ಚಾಗಿದ್ದು, ರಸ್ತೆಯಲ್ಲಿ ಅಡ್ಡದಿಡ್ಡಿಯಾಗಿ ಓಡಾಡುತ್ತ ವಾಹನಗಳ ಓಡಾಟಕ್ಕೆ ತುಂಬಾ ತೊಂದರೆಯಾಗಿದ್ದು, ಅಪಘಾತಗಳು ಸಂಭವಿಸುತ್ತಿರುವುದರಿಂದ ಗ್ರಾಮ ಪಂಚಾಯತಿಗೆ ಹಲವರು ದೂರು ನೀಡಿದ ಹಿನ್ನಲೆ ಗ್ರಾಮ ಪಂಚಾಯತಿಯವರು ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಬಿಡಲಾಗುವುದು ಎಂದು ಹಲವು ದಿನಗಳ ಹಿಂದೆ ಸಭೆ ನಡೆಸಿ ಗ್ರಾಮಸ್ಥರಿಗೆ ಸೂಚನೆ ನೀಡಿದ್ದರು.

ಮಂಗಳವಾರ ಜಯಪುರ ಗ್ರಾಮ ಪಂಚಾಯತಿಯವರು ಹಾಗೂ ಪೋಲಿಸ್ ಇಲಾಖೆ ಮತ್ತು ಪಶುಸಂಗೋಪನೆ ಇಲಾಖೆಯ ಸಹಯೋಗದೊಂದಿಗೆ ಸುಮಾರು 15 ಬಿಡಾಡಿ ದನಗಳನ್ನು ಹಿಡಿಯುವ ಮೂಲಕ ಯಶಸ್ವಿ ಕಾರ್ಯಾಚರಣೆ ನಡೆಸಿ ಹಿಡಿದ ಬಿಡಾಡಿ ದನಗಳನ್ನು ಶ್ರೀ ಶಂಕರ ಭಾರತಿ ಗೋಶಾಲೆ ಹುಯಿಗೆರೆಗೆ ಕಳುಹಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಜಯಪುರ ಪೋಲಿಸ್ ಠಾಣಾಧಿಕಾರಿ ಅಂಬರೀಶ್, ಜಯಪುರ ಪಶುವೈದ್ಯಧಿಕಾರಿ ಮಣಿಕಂಠ, ಜಯಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜೆ ಕೆ ಸುಕುಮಾರ್, ಪೋಲಿಸ್ ಸಿಬ್ಬಂದಿ ಸುನೀಲ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕರುಣಾಕರ,ಗ್ರಾಮ ಪಂಚಾಯತಿ ಸದಸ್ಯರಾದ ಸಂಪತ್ ಕುಮಾರ್, ಶ್ರೀನಿವಾಸ, ಪಣಿರಾಜ್, ಪ್ರವೀಣ್ ಕುಮಾರ್, ಕೃಷ್ಣಪ್ಪ, ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.

ವರದಿ: ಶಶಿ ಬೆತ್ತದಕೊಳಲು
