✒️ಚಂದನ್ ನಂದರಬೆಟ್ಟು

ಕೊಡಗು ಪ್ರವಾಸಿಗರ ಸ್ವರ್ಗ, ಕೊಡಗಿನತ್ತ ರಜೆಯ ಸವಿಯನ್ನು ಸವಿಯಲೆಂದು ಬರುವ ಪ್ರವಾಸಿಗರ ಸಂಖ್ಯೆ ಬಹಳಾ ಹೆಚ್ಚು. ಕೊಡಗಿನ ಪರಿಸರದ ಸೊಬಗು ಅಂತದ್ದು. ದೂರದ ಜಿಲ್ಲೆ, ರಾಜ್ಯ, ವಿದೇಶಗಳಿಂದ ಸೈನಿಕರ ನಾಡಿಗೆ ಬರುವ ಪ್ರವಾಸಿಗಳು ಇಲ್ಲಿನ ಮನೋಹರ ದೃಶ್ಯಾವಳಿಗಳಿಗೆ ಮರುಳಾಗುವುದು ಸಹಜ. ಹಾಗಂತ ಕೊಡಗಿನವರು ಪ್ರವಾಸ ಹೋಗುವುದಿಲ್ವಾ ಅನ್ನುವ ಪ್ರಶ್ನೆಗೆ ಉತ್ತರವಿದೆ.
ಕೊಡಗಿನ ಜನತೆ, ಸಮೀಪದ ಮಂಗಳೂರು, ಚಿಕ್ಕಮಗಳೂರು, ಬೇಲೂರಿನಂತಹ ಪುರಾಣ ಪ್ರಸಿದ್ಧ ಹಾಗು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಈ ಪ್ರವಾಸ ಹೆಚ್ಚುಕಮ್ಮಿ ಕುಟುಂಬಸ್ಥರೊಂದಿಗಿರುತ್ತದೆ. ಇದೆಲ್ಲದಕ್ಕೂ ಮಿಗಿಲಾಗಿ ಕೊಡಗಿನ ಒಂದಷ್ಟು ಯುವಕರು ಪುಟ್ಟ ತಂಡವೊಂದನ್ನು ರಚಿಸಿಕೊಂಡು ಊರೂರು ತಿರುಗಾಡುವ ಹವ್ಯಾಸವಿಟ್ಟುಕೊಂಡಿದ್ದಾರೆ. ತಿಂಗಳ ಹಿಂದೆ ಮಡಿಕೇರಿಯ ಯುವಕರ ಪುಟ್ಟ ತಂಡವೊಂದು ತಮ್ಮಿಷ್ಟದ ಬೈಕ್ ಗಳಿಗೆ ಲಗೇಜೇರಿಸಿ ಮಂಜಿನ ನಗರಿಯ ಚಳಿಗೆ ಕೇರೆನ್ನದೆ ಗಾಡಿ ಚಾಲೂ ಮಾಡಿ ಹೊರಟವರ ಮುಂದೆ ಇದ್ದದ್ದು ಬಹಳ ಸುಂದರ ಹಾದಿ. ಹರ್ಷಕ್ ಹಬೀಬ್, ಅಕ್ಷಯ್ ರೈ, ಅಭಿ ಶೆಟ್ಟಿ ಹಾಗು ಶಿವು ಮಡಪ್ಪಾಡಿ ಒಳಗೊಂಡ ತಂಡ. ಮಡಿಕೇರಿಯಿಂದ ಬೆಂಗಳೂರಿಗೆ ರೈಡ್ ಮೂಲಕ ಪ್ರಯಾಣ ಬೆಳೆಸಿ ಬಳಿಕ ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಿ ನಂತರ ಶುರು ಬೈಕ್ ಯಾನ. ದೆಹಲಿಯಿಂದ ಛಂಡೀಗಡ್ ಗೆ ಬೈಕ್ ಮೂಲಕ ಪ್ರಯಾಣಿಸುವ ಇವರು ಹಾದಿಯಲ್ಲಿ ಸಿಗುವ ಚಿಕ್ಕಪುಟ್ಟ ಹಳ್ಳಿಗಳ ಮೂಲಕ ಟ್ರಾವೆಲ್ ಮಾಡುವ ಆಸೆ ಹೊತ್ತುಕೊಂಡವರು.
ಬೈಕ್ ರೈಡ್ ಕೇವಲ ಜಾಲಿಯಾಗಿರದೆ ಬೇರೆ ಊರಿನ ಹಳ್ಳಿಗಳ ಜನ, ಜೀವನವನ್ನು, ಅಲ್ಲಿನ ಸಂಪ್ರದಾಯ, ಆಚಾರ, ವಿಚಾರಗಳನ್ನು ಗಮನಿಸುತ್ತಾ ಮುಂದೆ ತೆರಳುವ ಇವರಿಗೆ ಕೆಲವು ಹಳ್ಳಿ, ಪಟ್ಟಣಗಳ ವೈವಿಧ್ಯತೆ ಇಷ್ಟವಾಗಿಬಿಟ್ಟಿತ್ತು. ಮತ್ತದೇ ಮುಂದುವರಿಯುತ್ತಾ ಆಗುತ್ತಿದ್ದ ಚಿಕ್ಕಪುಟ್ಟ ಅಡೆತಡೆಗಳನ್ನೆಲ್ಲ ಮೀರಿ ಹಾದಿ ಸವೆಸುವ ಪ್ರಯತ್ನದಲ್ಲಿ ಛಂಡೀಗಡ್ ತಲುಪುತ್ತಾರೆ. ಹತ್ತು, ಹದಿನೈದು ದಿನಗಳ ತಮ್ಮ ಪ್ಲಾನಿಂಗ್, ಪುಟ್ಟ ಬಜೆಟ್ ನಲ್ಲಿ ಎಲ್ಲವನ್ನೂ ದಾಟಬೇಕು, ಜಯಿಸಬೇಕು ಎನ್ನುವ ಹುಮ್ಮಸ್ಸು ಇವರದು. ಛಲಗಾರ ಯುವಕರು ಛಂಡೀಗಡ್ ನಿಂದ ಶಿಮ್ಲಾಗೆ ಹೊರಟ ಸಮಯವೋ, ದೇವರಿಚ್ಛೆಯೋ ಅದೇ ಸಮಯದಲ್ಲಿ ಶಿಮ್ಲಾದಲ್ಲಿ ವರುಣನ ಆರ್ಭಟ ಅಧಿಕವೇ ಇತ್ತು. ಮಳೆಯ ರುದ್ರನರ್ತನಕ್ಕೆ ಆ ಪ್ರದೇಶ ಪ್ರಕೃತಿ ವಿಕೋಪಕ್ಕೆ ಗುರಿಯಾಗಿ ಬೆಟ್ಟ ಗುಡ್ಡಗಳು ಜರಿಯಲಾರಂಭಿಸಿದವು.

ಮುಂದಿನದು ಕಠಿಣ ಹಾದಿ
ಜರಿದ ಬರೆ, ಇಲ್ಲದ ರಸ್ತೆ ಕೊಡಗಿನ ಯುವಕರ ಪಾಡು ಚಿಂತಾಜನಕ. ಆದರೂ ಆಸೆ, ಆಕಾಂಕ್ಷೆಗಳಿಗೆ ಎಳ್ಳುನೀರು ಬಿಡಲು ಮನಸೊಪ್ಪದ ಛಲಗಾರರು ಮಾರ್ಗದರ್ಶಕರೂ ಹಾಗು ಬ್ಯಾಕಪ್ ವಾಹನವೂ ಇಲ್ಲದೆ ಸಿಕ್ಕ ಚಿಕ್ಕಪುಟ್ಟ ಅವಕಾಶಗಳು ಹಾಗು ಸ್ಥಳೀಯರ ನೆರವಿನಿಂದ ತಮ್ಮ ಗುರಿ ತಲುಪುವ ಉತ್ಸಾಹದೊಡನೆ ಮುನ್ನುಗ್ಗುತ್ತಾರೆ. ಶಿಮ್ಲಾವನ್ನು ಸಾಹಸದಿಂದ ದಾಟಿ ಭಾರತದ ಕೊನೆಯ ಹಳ್ಳಿ ಹಾಗು ಟಿಬೆಟ್ ಬಾರ್ಡರಿನ ಚಿಟ್ಕುಲ್ ತಲುಪುತ್ತಾರೆ. ಶಿಮ್ಲಾ ಹಾಗು ಚಿಟ್ಕುಲ್ ನಡುವಿನ 24 ಕಿ.ಮೀ ಅಂತರದ ಕಲ್ಲು, ಮಣ್ಣಿನ ಹಾದಿ ಸವೆಸಲು 3 ರಿಂದ ಮೂರುವರೆ ಗಂಟೆಯ ಸಮಯ ತೆಗೆದುಕೊಂಡು 4.500 ಮೀ ಅಲ್ಟಿಟ್ಯೂಡ್ (ಇಂತಹ ಪ್ರದೇಶಗಳಲ್ಲಿ ರಸ್ತೆಯೇ ಇಲ್ಲದ ಹಾದಿ ಜೊತೆಗೆ ಆಮ್ಲಜನಕ ಬಹಳ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಇದು ಉಸಿರಾಟಕ್ಕೆ ಬಹಳ ಕಷ್ಟಕರ ಹಾಗು ದೈಹಿಕ ಸಾಮರ್ಥ್ಯವನ್ನು ಕುಗ್ಗಿಸುತ್ತದೆ) ಇರುವ ಚಿಟ್ಕುಲ್ ತಲುಪಿ ನಿರಾಳರಾಗುತ್ತಾರೆ. ಅಲ್ಲಿಂದ ಮುಂದೆ ತೆರಳಿ ಭಾರತದ ಅತಿ ಎತ್ತರದ ಪೋಸ್ಟ್ ಆಫೀಸ್ ಹಿಕ್ಕಿಂ ನಲ್ಲಿ ಪೋಟೋಶೂಟ್ ಮುಗಿಸಿ ಪ್ರಪಂಚದ ದೊಡ್ಡ ಸೇತುವೆಯಾದ ಚಿಂಚುಂ ಸೇತುವೆಯನ್ನು ಕ್ರಮಿಸಿ, ಪ್ರಪಂಚದ ಅತೀ ಎತ್ತರದಲ್ಲಿರುವ ಹಳ್ಳಿಯಾದ ಕಾಮಿಕ್ ನಲ್ಲಿ ನಿಂತು ಅಲ್ಲಿನ ಸೌಂದರ್ಯ ವೀಕ್ಷಿಸಿ ಮುಂದೆ ತೆರಳುತ್ತಾರೆ.
ಹಿಂದಿನ ದಿನ ಉಳಿದಿದ್ದ ಹೋಂಸ್ಟೇ ಮರುದಿನಕ್ಕೆ ಮಣ್ಣಿನಡಿ : ಕಷ್ಟಕರ ದಾರಿಯಲ್ಲಿ ಸಾಗುವುದೇ ಸವಾಲಿನ ಕೆಲಸ, ಅದರಲ್ಲೂ ನಾರ್ಕಂದ ಎನ್ನುವ ಸ್ಥಳದಲ್ಲಿ ಒಂದು ರಾತ್ರಿ ಉಳಿದಿದ್ದ ನೆನಪು ಮರೆಯಲಾಗದ್ದು, ನಾರ್ಕಂದದ ಹೋಂಸ್ಟೇ ಒಂದರಲ್ಲಿ ರಾತ್ರಿ ಕಳೆದಿದ್ದೆವು ಆದರೆ ಅಲ್ಲಿನ ಗುಡ್ಡ ಕುಸಿತದಿಂದ ಮರುದಿನ ಆ ಹೋಂ ಸ್ಟೇ ಮಣ್ಣಿನಡಿ ಮುಚ್ಚಿಹೋಗಿತ್ತು. ಆ ಸುದ್ದಿ ಕೇಳಿದ ತಕ್ಷಣ ಒಮ್ಮೆ ಆ ಚಳಿಯಲ್ಲೂ ಬೆವತಿದ್ದೆವು.

ಸವಾಲು : ಕಲ್ಲು, ಮಣ್ಣುಗಳಿಂದ ಕೂಡಿ, ರಸ್ತೆಯೇ ಇಲ್ಲದ ಹಾದಿಯಲ್ಲಿ ಬೈಕ್ ಬಹಳಷ್ಟು ಕಷ್ಟ ಕೊಡುತಿತ್ತು, ಎಲ್ಲಿ ಕ್ಲಚ್ ಪ್ಲೇಟ್ ಹಾಳಾಗುವುದೋ ಎಂಬ ಭಯವಿತ್ತು. ಈ ನಡುವೆ ಕಲ್ಲುಗಳ ಮೇಲೆ ಸಂಚರಿಸಿದ ಕಾರಣ ಗೆಳೆಯನ ಬೈಕಿನ
ಟೈರ್ ಪಂಚರ್ ಆಗಿತ್ತು. ಟ್ರಾವಲ್ ನಲ್ಲಿ ಇದೆಲ್ಲ ಸಾಮಾನ್ಯವಾದರೂ ಬ್ಯಾಕಪ್ ವೆಹಿಕಲ್ ಇಲ್ಲದ ನಮಗೆ ಇದು ಕೂಡ ಸವಾಲಾಗಿ ಪರಿಣಮಿಸಿತು. ಹೇಗೋ ಪಾಡು ಪಟ್ಟು ಸರಿ ಮಾಡಿಸಿಕೊಂಡಿದ್ದೆವು.
ಬದುಕಿ ಬಂದದ್ದೇ ಹೆಚ್ಚು
ಹಾದಿಯುದ್ದಕ್ಕೂ ಮೇಲಿನಿಂದ ಕಲ್ಲು,ಮಣ್ಣು ಬೀಳುತ್ತಲೇ ಇತ್ತು. ಹರ್ಷಕ್ ಕಾಲಿಗೆ ಸ್ವಲ್ಪ ದೊಡ್ಡದೇ ಆದ ಕಲ್ಲೊಂದು ತಗುಲಿ ಕ್ಷಣ ಭಯವಾಗಿತ್ತು. ಮೇಲಿಂದ ಯಾವಾಗ ಮಣ್ಣು ಜರುಗುವುದೋ ತಿಳಿಯದು ಆದರು ಮುನ್ನುಗ್ಗುವ ಛಲ ಧೈರ್ಯ ನೀಡಿತ್ತು. ನಾವು ಕ್ರಮಿಸಿ ಬಂದ ಬಳಿಕ ಆ ಹಾದಿಯಲ್ಲಿ ನಡೆದ ಘಟನೆಗಳು ತಿಳಿದಾಗ ನಾವು ಬದುಕಿದ್ದೇ ಪವಾಡ ಎನಿಸಿತ್ತು.
ಎತ್ತರದ ಪೋಸ್ಟ್ ಆಫೀಸ್ ನಿಂದ ಪತ್ರ
ಭಾರತದ ಅತೀ ಎತ್ತರದ ಪೋಸ್ಟ್ ಆಫೀಸ್ ಕಾಣುವಾಗ, ಚಿಕ್ಕಂದಿನಲ್ಲಿ ಬರೆದ ಪತ್ರಗಳ ನೆನಪಾಗಿ, ಅಲ್ಲಿಂದಲೇ ಬಹಳಷ್ಟು ಪತ್ರಗಳನ್ನು ಸ್ನೇಹಿತರಿಗೆ ಬರೆದಿದ್ದೆವು. ಅದೊಂದು ಸ್ಮರಣೀಯ ಕ್ಷಣ. ಅಂತಹ ಕ್ಷಣ ಮತ್ತೊಮ್ಮೆ ಬರುವುದು ಅನುಮಾನ.

