ಚಿಕ್ಕಮಗಳೂರು: ವಯಸ್ಸಾದ ತಂದೆ ತಾಯಿಯಿಂದ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡು ಹೊರಗಡೆ ಹಾಕಿರುವ ಪಾಪಿ ಮಗ. ಈ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಾರೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ವೃದ್ಧ ದಂಪತಿ ಹೆಸರು ದಾಕ್ಷಾಯಿಣಿ ಹಾಗೂ ಮಲ್ಲೇಶಪ್ಪ, ಮದುವೆಯಾಗಿ 12 ವರ್ಷದ ಬಳಿಕ ಗಂಡು ಮಗ ಜನಿಸಿದ ಎಂಬ ಸಂತಸದಿಂದ ಸಂತೋಷ್ ಎನ್ನುವ ಹೆಸರಿಟ್ಟು ಪ್ರೀತಿಯಿಂದ ಸಾಕಿ ಸಲಹಿ ಕಷ್ಟ ಪಟ್ಟು ಇಂಜಿನಿಯರಿಂಗ್ ಓದಿಸಿದ್ದರು, ಆ ಮಗನೇ ಈಗ ಪೋಷಕರಿಗೆ ನರಕಾಯಾತನೇ ಅನುಔಬಿಸುವ ಹಾಗೆ ಮಾಡಿದ್ದಾನೆ.
ಪೋಷಕರ ಹೆಸರಿನಲ್ಲಿದ್ದ 10 ಎಕರೆ ಜಮೀನು ಸಂತೋಷ್ ತನ್ನ ಹೆಸರಿಗೆ ಮಾಡಿಕೊಂಡು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಇದ್ದರೇ, ಇನ್ನೊಂದು ಕಡೆ ಪೋಷಕರು ಕಣ್ಣೀರಿಡುತ್ತಿದ್ದಾರೆ.
ಮಗನಿಂದ ಮೋಸ ಆಗಿದೆ ಎಂದು ಕಡೂರು ಠಾಣೆಗೆ ಪೋಷಕರು ದೂರು ನೀಡಿದ್ದಕ್ಕೆ, ಮಗನಾದ ಸಂತೋಷ್ ಬೆಂಗಳೂರಿನಿಂದ ಬಂದು ಹಲ್ಲೆ ಮಾಡಿದ ಪ್ರಕರಣಕ್ಕೆ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಪೋಷಕರಿಗೆ ಪ್ರತಿ ತಿಂಗಳು 10 ಸಾವಿರ ಜೀವನಾಂಶವಾಗಿ ನೀಡಬೇಕೆಂದು ಆದೇಶ ಹೋರಡಿಸಿತ್ತು.
ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ ಸಂತೋಷ್, ಜೀವನಾಂಶದ ಮೊತ್ತವನ್ನು 5 ಸಾವಿರಕ್ಕೆ ಇಳಿಸಿದಾನಂತೆ. ಅಲ್ಲದೇ ಇದ್ದ ಮನೆಯೂ ಕುಸಿದು ಬಿದ್ದಿದ್ದು ಇದೀಗ ವಾಸ ಮಾಡಲು ನೆಲೆ ಇಲ್ಲದಂತಾಗಿದೆ. ಮಲ್ಲೇಶಪ್ಪ ಅವರಿಗೆ ಎರಡು ಕಿವಿ ಕೇಳಿಸದೇ ಇರುವುದರಿಂದ ದಾಕ್ಷಾಯಿಣಿಯವರು ತೀವ್ರ ತೊಂದರೆಗೆ ಸಿಲುಕಿದ್ದಾರೆ.
ಊರಿನವರು ವೃದ್ಧ ದಂಪತಿಯ ಸಹಾಯಕ್ಕೆ ಹೋದರೆ ಅವರಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಾನೆಂದು ಪೋಷಕರು ತಿಳಿಸಿದರು. ಮಕ್ಕಳಿಲ್ಲದೆ ಪರದಾಡಿ ಮಕ್ಕಳು ಪಡೆದ ಪೋಷಕರಿಗೆ ಇಂತಹ ಅನ್ಯಾಯ ಆಗಬಾರದು. ಹಾಗೆಯೇ, ಮೊಮ್ಮಕ್ಕಳ ಜೊತೆ ಕಾಲ ಕಳೆಯಬೇಕಿದ್ದ ಪೋಷಕರು ನ್ಯಾಯಕ್ಕಾಗಿ ಅಲೆಯುವಂತಹ ಪರಿಸ್ಥಿತಿ ಎದುರಾಗಿದೆ
