Wednesday, March 25, 2026
Homeಜಿಲ್ಲಾಸುದ್ದಿಕಡೂರು: ಸಣ್ಣತನವನ್ನು ಬದಿಗೊತ್ತಿದರೆ ಸಂಸ್ಥೆಗಳು ರೈತರ ಸಹಕಾರದಿಂದ ಸಧೃಡವಾಗಿ ಬೆಳೆಯಲು ಸಾಧ್ಯ!

ಕಡೂರು: ಸಣ್ಣತನವನ್ನು ಬದಿಗೊತ್ತಿದರೆ ಸಂಸ್ಥೆಗಳು ರೈತರ ಸಹಕಾರದಿಂದ ಸಧೃಡವಾಗಿ ಬೆಳೆಯಲು ಸಾಧ್ಯ!

ಕಡೂರು : ಸಣ್ಣತನವನ್ನು ಬದಿಗೊತ್ತಿದರೆ ಸಂಸ್ಥೆಗಳು ರೈತರ ಸಹಕಾರದಿಂದ ಸಧೃಡವಾಗಿ ಬೆಳೆಯಲು ಸಾಕಷ್ಟು ಅವಕಾಶಗಳು ಲಭಿಸಲಿದೆ ಎಂದು ಬೆಂಗಳೂರು ಜಲಾನಯನ ಅಭಿವೃದ್ದಿ ಇಲಾಖೆಯ ತೋಟಗಾರಿಕೆ ಜಂಟಿ ನಿರ್ದೇಶಕ ಬಿ.ಎನ್. ಪ್ರಸಾದ್ ಅಭಿಪ್ರಾಯಪಟ್ಟರು.


ಪಟ್ಟಣದ ಹೊರವಲಯದಲ್ಲಿರುವ ಹೆರಿಟೇಜ್ ಕನ್ವೆನ್ಷನ್ ಹಾಲ್‌ನಲ್ಲಿ ಶುಕ್ರವಾರ ದಕ್ಷಿಣ ಭಾಗದ ದಾಳಿಂಬೆ ಬೆಳೆಗಾರರ ರೈತೋತ್ಪಾದಕ ಸಂಸ್ಥೆ ಹಾಗೂ ರಾಷ್ಟ್ರೀಯ ದಾಳಿಂಬೆ ಸಂಶೋಧನ ಕೇಂದ್ರ ಸೊಲ್ಲಾಪುರ(ಮಹಾರಾಷ್ಟ್ರ), ಸಹಯೋಗದೊಂದಿಗೆ ನಡೆದ ೪ನೇ ದಾಳಿಂಬೆಯ ತಾಂತ್ರಿಕ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯಾದ್ಯಂತ ಸುಮಾರು 750ಕ್ಕೂ ಹೆಚ್ಚು ರೈತ ಉತ್ಪಾದಕ ಸಂಸ್ಥೆಗಳು ತನ್ನ ಪರಿಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಸಂಸ್ಥೆಗಳು ನಿಷ್ಕ್ರಿಯಗೊಳಿಸಿವೆ. ಆದರೆ ದಾಳಿಂಬೆ ಬೆಳೆಗಾಗಿಯೇ ರೈತರಿಗೆ ಪೂರಕವಾದ ತಾಂತ್ರಿಕ ಮಾಹಿತಿಗಳನ್ನು ಒಳಗೊಂಡ ಸಂಸ್ಥೆಯನ್ನು ಕಳೆದ ೪ ವರ್ಷದ ಹಿಂದೆ ಹುಟ್ಟು ಹಾಕಿರುವ ಸಂಸ್ಥೆಯು ಕಡಿಮೆ ಅವಧಿಯಲ್ಲಿ ಆರ್ಥಿಕವಾಗಿ ಸಧೃಡಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.


ದಾಳಿಂಬೆಯ ಉತ್ಪಾದನೆಯಿಂದ ಆರ್ಥಿಕವಾಗಿ ೨೦೦ ಕೋಟಿಯಷ್ಟು ವಹಿವಾಟು ನಡೆಯುತ್ತಿವೆ. ಇದಕ್ಕೆ ದಾಳಿಂಬೆ ಬೆಳೆಗಾರರ ಕೊಡುಗೆ ಅಪಾರವಾಗಿದೆ. ಮುಖ್ಯವಾಗಿ ಬೆಳೆಗಾರರು ಉತ್ಕೃಷ್ಟ ಬೆಳೆ ಬೆಳೆಯಲು ಒತ್ತುಕೊಡಬೇಕಿದೆ. ಇದಕ್ಕೆ ಪೂರಕವಾಗಿ ದಾಳಿಂಬೆ ರೈತೋತ್ಪಾದಕ ಸಂಸ್ಥೆಯು ಬೆನ್ನಲುಬಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಸ್ಥೆಯು ತನ್ನ ಶಾಖೆಗಳನ್ನು ಆರಂಭಿಸುವ ಚಿಂತನೆ ನಡೆಸಬೇಕಿದೆ. ಇದರಿಂದ ರೈತನ ಬೆಳೆಗಳಿಗೆ ಮಾರುಕಟ್ಟೆಯ ಸುಧಾರಣೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದರು.


ಸರಕಾರ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ರೈತರ ಹಿತಕಾಪಾಡುವ ಯೋಜನೆಗಳು ಸಂಸ್ಥೆಗಳ ಮೂಲಕ ಮುನ್ನಲೆಗೆ ಬಂದರೆ ಅವುಗಳಿಗೆ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ಮಾಡಲಿದೆ. ರೈತರುಗಳು ಕೇವಲ ಬೆಳೆ ಬೆಳೆಯುವುದಕ್ಕೆ ಸೀಮಿತಗೊಳಿಸದೆ ತನ್ನ ಬೆಳೆಗಳ ಸಾಧಕಬಾಧಕಗಳ ಬಗ್ಗೆ ಹೆಚ್ಚು ಮಾಹಿತಿ ಪಡೆದುಕೊಳ್ಳಬೇಕಿದೆ, ತೆಂಗು-ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಕಾಳುಮೆಣಸುಗಳನ್ನು ಬೆಳೆಯ ಬಹುದು, ಬೆಳೆದ ಬೆಳೆಗಳಿಗೆ ಸೂಕ್ತಮಾರುಕಟ್ಟೆಯಲ್ಲಿ ಬೆಳೆಸಲು ಎಲ್ಲಾ ಅವಕಾಶಗಳು ಸಿಗಲಿದ್ದು, ಇದರಿಂದ ಆದಾಯದಗಳಿಕೆ ವೃದ್ದಿಗೊಳ್ಳಲಿದ್ದು ರೈತರು ಉತ್ಸುಕರಾಗಬೇಕಿದೆ ಎಂದರು.


ಕೃಷಿ ಜಂಟಿ ನಿರ್ದೇಶಕ ಎಂ. ತಿರುಮಲೇಶ್ ಮಾತನಾಡಿ, ರೈತರುಗಳು ಒಂದಾದರೆ ಏನು ಬೇಕಾದರೂ ಮಾಡಲು ಸಿದ್ದರಾಗಿರುತ್ತಾರೆ. ಪ್ರಸ್ತುತ ಬೆಳೆಗಳಿಗೆ ಅದರ ಸ್ಥಿರತೆ ಮತ್ತು ಲಭ್ಯತೆಯನ್ನು ಆಲೋಚಿಸಬೇಕಿದೆ. ದಾಳಿಂಬೆ ಬೆಳೆ ಒಮ್ಮೆಲೆ ಬೆಳೆದರೆ ಮುಂದೇನೂ ಎಂಬ ಯೋಚನೆಯನ್ನು ಪರಿಗಣಿಸಬೇಕಿದೆ. ಮಣ್ಣಿನ ಸತ್ವದಲ್ಲಿನ ಪೂರಕ ವಾತಾವರಣಕ್ಕೆ ಅನುಗುಣವಾಗಿ ಪರ್ಯಾಯ ಬೆಳೆಗಳು ಮತ್ತು ಸಂಸ್ಕರಣೆ ಪಡಿಸುವ ಕ್ರಮಗಳಿಗೆ ಒತ್ತುಕೊಡಬೇಕಿದೆ. ರೈತರು ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಳ್ಳಬೇಕಿದೆ. ತನ್ನ ಉತ್ಪನ್ನಗಳಿಗೆ ಸೂಕ್ತ ಬೆಲೆಗಳನ್ನು ಕಲ್ಪಿಸಿಕೊಳ್ಳಲು ಪ್ಯಾಕಿಂಗ್ ವ್ಯವಸ್ಥೆಯಿಂದ ಹೊರದೇಶಗಳಿಗೆ ರಫ್ತು ಮಾಡಲು ಸಹಕಾರಿಯಾಗಬೇಕಿದೆ. ಇದಕ್ಕೆ ಭವಿಷ್ಯದ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಚಿಂತಿಸಬೇಕಿದೆ ಎಂದರು.


ತೋಟಗಾರಿಕೆ ಜಂಟಿ ನಿರ್ದೇಶಕಿ ಕೆ. ಮಂಗಳ ಮಾತನಾಡಿ, ತೋಟಗಾರಿಕೆ ಬೆಳೆಯಲ್ಲಿ ದಾಳಿಂಬೆಯು ಶ್ರೀಮಂತ ಬೆಳೆಯಾಗಿ ಮಾರ್ಪಾಡುಗೊಂಡಿದೆ. ಇದಕ್ಕೆ ರೈತರ ಬದ್ದತೆಯು ಮುಖ್ಯಕಾರಣವಾಗಿದೆ. ದಾಳಿಂಬೆ ಗಿಡಗಳಿಗೆ ವೈದ್ಯರಾಗಿ ಯೋಗೀಶ್ವರ ಅವರ ಕಾರ್ಯಕ್ಷಮತೆ ಹೆಚ್ಚುಗೊಂಡಿದೆ ಎಂದರು.


ಎಸ್.ಆರ್.ಪಿ.ಜಿ. ಸಂಸ್ಥೆ ನಿರ್ದೇಶಕ ಎಸ್.ಎಂ. ಮಂಜುನಾಥ್ ಮಾತನಾಡಿ, ಆರ್ಥಿಕವಾಗಿ ರೈತ ಸಬಲರಾದರೆ ದೇಶ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಸ್ಥೆಯು ವರ್ಷ ದಿಂದ ವರ್ಷಕ್ಕೆ ಆರ್ಥಿಕವಾಗಿ ಬೆಳವಣಿಗೆಗೊಂಡು ಕಳೆದ 4 ವರ್ಷದಲ್ಲಿ 4.25 ಕೋಟಿ ಲಾಭಾಂಶಗಳಿಸಿ ಸಂಸ್ಥೆಯ ಷೇರುದಾರರಿಗೆ ೨೫ ಸಾವಿರ ಡಿವಿಡೆಂಟ್ ನೀಡಲಾಗುತ್ತಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಆರ್.ಪಿ.ಜಿ ಸಂಸ್ಥೆಯ ಅಧ್ಯಕ್ಷ ಎಚ್.ಆರ್.ಯೋಗೀಶ್ವರ ಮಾತನಾಡಿ, ತಾಂತ್ರಿಕವಾಗಿ ದಾಳಿಂಬೆ ಬೆಳೆಗಾರರು ಶೈಕ್ಷಣಿಕವಾಗಿ ಮುಂದುವರೆಯಬೇಕೆಂಬ ಆಶಯದಿಂದ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ. ಈಗಾಗಲೇ ಬೆಳೆಗಾರರಿಗೆ ಬೆಳೆಯಲ್ಲಿ ಯಾವುದೇ ಸಮಸ್ಯೆ ಎದುರಾದರೂ ತಕ್ಷಣ ಪರಿಹಾರ ದೊರಕಿಸಬೇಕೆಂಬ ನಿಟ್ಟಿನಲ್ಲಿ ರಾಷ್ಟ್ರೀಯ ದಾಳಿಂಬೆ ಸಂಶೋಧನ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದೇ ರೀತಿ ಉತ್ಪಾದನೆಗೂ ಗಮನಹರಿಸಲಾಗಿದ್ದು, ಜಿಯೊಟ್ಯಾಗ್ ವ್ಯವಸ್ಥೆ ಕಲ್ಪಿಸಿ ಮಾರುಕಟ್ಟೆಗೆ ಕ್ರಮವಹಿಸಲಾಗುತ್ತದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ದಾಳಿಂಬೆಯ ಉತ್ಪನ್ನಗಳು ಹೆಚ್ಚು ಉತ್ಕೃಷ್ಟಗೊಂಡಿರುವುದು ಬೇಡಿಕೆಯು ಹೆಚ್ಚಾಗಿದೆ ಎಂದರು.


ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಲ್ಲಿ ದಾಳಿಂಬೆ ಬೆಳೆದು ಉತ್ತಮ ಆದಾಯಗಳಿಸಿದ ಬೆಳೆಗಾರರಿಗೆ ಗೌರವಿಸಲಾಯಿತು. ಹಾಸನ ಕೃಷಿ ಜಂಟಿ ನಿರ್ದೇಶಕ ಪಿ.ರಮೇಶ್‌ಕುಮಾರ್, ತಾಂತ್ರಿಕ ವಿಜ್ಞಾನಿಗಳಾದ ಡಾ.ಎನ್.ಮಂಜುನಾಥ್, ಡಾ. ಶಿಲ್ಪಾ, ಟಿ.ಎಸ್.ದಿನೇಶ್, ಎಸ್.ಆರ್.ಪಿ.ಜಿ. ಸಂಸ್ಥೆ ನಿರ್ದೇಶಕರಾದ ಜಿ.ಎಸ್. ಯತೀಶ್ ಗುಣಸಾಗರ, ಗೋವರ್ಧನ್, ಡಿ.ಆರ್. ಸಚ್ಚಿದಾನಂದ ಸ್ವಾಮಿ, ಟಿ.ಕೆ. ಶ್ಯಾಮಲಾ, ತೋಟಗಾರಿಕೆ ಸಹಾಯಕ ನಿರ್ದೇಶಕ ಜಯದೇವಪ್ಪ, ಶ್ರೀಧರ್, ಸಂಸ್ಥೆಯ ಸಿಇಒ ಪ್ರಿಯಾ ಮತ್ತಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!