ಕಳಸ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ವಿಭಾಗದ 17 ವರ್ಷದೊಳಗಿನವರ ವಿಭಾಗದ 5000 ಮೀಟರ್ ವೇಗದ ನಡಿಗೆಯಲ್ಲಿ ಕಳಸ ಜೆಇಎಂ ಶಾಲೆಯ ವಿದುಷಾ ಚಿನ್ನದ ಸಾಧನೆ ಮಾಡಿದ್ದಾಳೆ.

ಕಳೆದ ವರ್ಷ ವಿದುಷಾ ಇದೇ ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನ ಗಳಿಸಿ ಕೂದಲೆಳೆಯಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಅವಕಾಶವಂಚಿತಳಾಗಿದ್ದಳು. ಈ ಬಾರಿ ತರಬೇತುದಾರ ಪ್ರಶಾಂತ್ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮ ಮಾಡಿದ್ದ ವಿದುಷಾ ರಾಜ್ಯಮಟ್ಟದಲ್ಲಿ ಅಗ್ರಸ್ಥಾನದ ಜೊತೆಗೆ ಚಿನ್ನದ ಪದಕ ಗಳಿಸಿದ್ದಾಳೆ.
ಕಳಸದ ವೀಣಾ ಜೈನ್ ಮತ್ತು ಸತ್ಯೇಂದ್ರ ಜೈನ್ ದಂಪತಿಯ ಮಗಳಾದ ವಿದುಷಾ ಇದೀಗ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.
ಜೆಇಎಂ ಶಾಲೆಯ ಮತ್ತೋರ್ವ ವಿದ್ಯಾರ್ಥಿ 10 ನೇ ತರಗತಿಯ ಮೊಹಮ್ಮದ್ ಫಾರಿಸ್ ಕೂಡ ಬಾಲಕರ ವಿಭಾಗದ 5000 ವೇಗದ ನಡಿಗೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದಾನೆ.
ಸಂಸೆಯ ಫಾರುಕ್-ಅಬಿಬಾ ದಂಪತಿಯ ಮಗನಾದ ಫಾರಿಸ್ ಕೂಡ ತರಬೇತುದಾರರಾದ ಹೆಚ್.ಆರ್.ಪ್ರಶಾಂತ್ ಕಟ್ಟುನಿಟ್ಟಿನ ಮಾರ್ಗದರ್ಶನದಲ್ಲಿ ಪಳಗಿದ್ದನು.
ಮುಂದಿನ ವಾರ ಉತ್ತರಪ್ರದೇಶದ ಲಕ್ನೋ ನಗರದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ವಿದುಷಾ ಮತ್ತು ಫಾರಿಸ್ ತಮ್ಮ ಪ್ರತಿಭೆಯನ್ನು ತೋರಿಸಲಿದ್ದಾರೆ.
ಶಾಲೆಯ ಶಿಕ್ಷಕ ಪ್ರಶಾಂತ್ ಅವರ ನಿಷ್ಠಾವಂತ ತರಬೇತಿಯಲ್ಲಿ ಬೆಳೆದ ಇಬ್ಬರು ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಶಿಕ್ಷಕರ ವೃಂದ ಹಾಗೂ ಕಳಸದ ಜನತೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
