ಕೊಪ್ಪ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಕೈಚಳಕ ತೋರಿಸುವ ಘಟನೆ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪರಮೇಶ್ವರ ಆಚಾರಿ ಎಂಬುವವರು ತಮ್ಮ ಪತ್ನಿಯೊಂದಿಗೆ ಎಂದಿನಂತೆ ಬೆಳಗ್ಗೆ ಕೂಲಿ ಕೆಲಸಕ್ಕೆ ತೆರಳಿದ್ದರು ಮತ್ತು ಅವರ ಪುತ್ರ ನೂತನ್ ಮಧ್ಯಾಹ್ನ ಮನೆಗೆ ಬೀಗ ಹಾಕಿ ಕೊಪ್ಪ ಪೇಟೆಗೆ ತೆರಳಿದ್ದನು.

ಇದೇ ಸಮಯವನ್ನು ಹೊಂಚು ಹಾಕಿದ್ದ ಚಾಲಾಕಿ ಕಳ್ಳರು, ಯಾರೂ ಇಲ್ಲದ ವೇಳೆ ಮನೆಯ ಮೇಲ್ಪಾವಣಿಯ ಹಂಚುಗಳನ್ನು ಸರಿಸಿ ಒಳನುಗ್ಗಿದ್ದಾರೆ. ಮನೆಯಲ್ಲಿದ್ದ ಎರಡು ಗಾಡೇಜ್ ಬೀರುಗಳನ್ನು ಹತಾರಗಳಿಂದ ಒಡೆದು ಸುಮಾರು 4 ಪವನ್ ತೂಕದ ಮಾಂಗಲ್ಯ ಸರ, ಕಿವಿಯೋಲೆ ಹಾಗೂ ಮಗನಿಗೆ ಸೇರಿದ ಚಿನ್ನದ ಉಂಗುರ ಸೇರಿ ಒಟ್ಟು 44 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದಾರೆ.
ಅಷ್ಟೇ ಅಲ್ಲದೆ, 150 ಗ್ರಾಂ ತೂಕದ ಬೆಳ್ಳಿ ಲೋಟ ಮತ್ತು ಪೂಜಾ ಪರಿಕರಗಳು ಹಾಗೂ ಕಷ್ಟಪಟ್ಟು ಉಳಿಸಿದ್ದ 45,000 ರೂಪಾಯಿ ನಗದು ಹಣವನ್ನೂ ಲೂಟಿ ಮಾಡಿ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ.
ಕೆಲಸ ಮುಗಿಸಿ ಮನೆಗೆ ಮರಳಿದ ಮಾಲೀಕರಿಗೆ ನಡುಮನೆಯ ಹಂಚು ತೆಗೆದಿರುವುದು ಮತ್ತು ಬೀರುಗಳು ಒಡೆದಿರುವುದು ಕಂಡುಬಂದಾಗ ಘಟನೆ ಬೆಳಕಿಗೆ ಬಂದಿದೆ. ಒಟ್ಟು 4,09,000 ರೂಪಾಯಿ ಮೌಲ್ಯದ ಆಸ್ತಿ ಕಳುವಾಗಿದ್ದು, ಈ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಲೀಸರು ಶೀಘ್ರವೇ ಕಳ್ಳರನ್ನು ಪತ್ತೆಹಚ್ಚುವ ಭರವಸೆ ನೀಡಿದ್ದು ತನಿಖೆ ತೀವ್ರಗೊಳಿಸಿದ್ದಾರೆ.
