Sunday, March 29, 2026
Homeಜಿಲ್ಲಾಸುದ್ದಿಕೊಟ್ಟಿಗೆಹಾರ:ತೇಜಸ್ವಿ ಪ್ರತಿಷ್ಠಾನದ ಚಿಟ್ಟೆ ಉದ್ಯಾನ, ಆರ್ಕಿಡೇರಿಯಂ ಶೀಘ್ರದಲ್ಲಿ ವೀಕ್ಷಣೆ ಅಂತ್ಯ!

ಕೊಟ್ಟಿಗೆಹಾರ:ತೇಜಸ್ವಿ ಪ್ರತಿಷ್ಠಾನದ ಚಿಟ್ಟೆ ಉದ್ಯಾನ, ಆರ್ಕಿಡೇರಿಯಂ ಶೀಘ್ರದಲ್ಲಿ ವೀಕ್ಷಣೆ ಅಂತ್ಯ!

ಮೂಡಿಗೆರೆ: ‘ಕೊಟ್ಟಿಗೆಹಾರದ ಕೆ‌.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಚಿಟ್ಟೆ ಉದ್ಯಾನ, ಆರ್ಕಿಡೇರಿಯಂ ಶೀಘ್ರದಲ್ಲಿ ವೀಕ್ಷಣೆಗೆ ಮುಕ್ತಗೊಳ್ಳಲಿದೆ’ ಎಂದು ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಸಿ.ರಮೇಶ್ ಹೇಳಿದರು.

ತೇಜಸ್ವಿ ಅವರ ಜನ್ಮದಿನದ ಹಿನ್ನೆಲೆ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ವ್ಯಂಗ್ಯಚಿತ್ರ, ಹಕ್ಕಿ, ಕೀಟ ಚಿತ್ರಕಲೆ, ಕನ್ನಡ ಹಸ್ತಾಕ್ಷರ ಕಾರ್ಯಾಗಾರದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಿಟ್ಟೆ ಉದ್ಯಾನದಲ್ಲಿ ಚಿಟ್ಟೆಗಳನ್ನು ಆಕರ್ಷಿಸುವ ಸಸ್ಯಗಳನ್ನು ನೆಡುವ ಮೂಲಕ ಚಿಟ್ಟೆಗಳ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ನಿರ್ಮಿಸಲಾಗುತ್ತಿದೆ. ಅರ್ಕಿಡೇರಿಯಂನಲ್ಲಿ ಪಶ್ಚಿಮ ಘಟ್ಟಗಳಲ್ಲಿ ಕಾಣ ಸಿಗುವ ಆರ್ಕಿಡ್ ಸಸ್ಯಗಳನ್ನು ಇಡಲಾಗಿದ್ದು, ಅವುಗಳ ಮಾಹಿತಿ ಹಾಗೂ ಚಿತ್ರಗಳು ಇರಲಿವೆ. ನಾಟಕ, ಸಿನಿಮಾ ಪ್ರದರ್ಶನ ಮುಂತಾದ ಕಾರ್ಯಕ್ರಮಗಳಿಗೆ ಪೂರಕವಾದ ಧ್ವನಿ ಬೆಳಕಿನ ತಾಂತ್ರಿಕ ಸವಲತ್ತುಗಳಿರುವ ಕಿರು ರಂಗಮಂದಿರ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ, ‘ತೇಜಸ್ವಿ ಪ್ರತಿಷ್ಠಾನವು ತೇಜಸ್ವಿ ಅವರ ಬಹುಮುಖ ಆಸಕ್ತಿಗೆ ಪೂರಕವಾದ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದರು.

ವ್ಯಂಗ್ಯ ಚಿತ್ರಕಾರ ಗುಜ್ಜಾರಪ್ಪ ಮಾತನಾಡಿ, ‘ವ್ಯಂಗ್ಯಚಿತ್ರ ರಚನೆ ಕಲಿಯಲು ನಿರಂತರ ಅಭ್ಯಾಸ ಬೇಕಾಗುತ್ತದೆ. ವ್ಯಂಗ್ಯಚಿತ್ರ ರಚನಾ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳಿದ್ದು, ಶಿಬಿರಾರ್ಥಿಗಳು ಈ ಅವಕಾಶ ಬಳಸಿಕೊಳ್ಳಬೇಕು’ ಎಂದರು.

ವ್ಯಂಗ್ಯ ಚಿತ್ರಕಾರ ಗುಜ್ಜಾರಪ್ಪ ‘ಡಿಜಿಟಲ್ ವ್ಯಂಗ್ಯಚಿತ್ರ’, ರಾ. ಸೂರಿ ‘ಹಸ್ತ ವ್ಯಂಗ್ಯಚಿತ್ರ’, ನಾಗನಾಥ್ ಜಿ.ಎಸ್. ‘ಕಾರ್ಟೂನ್ ಪಾತ್ರ ನಿರ್ಮಾಣದ’ ಕುರಿತು ಕಾರ್ಯಾಗಾರದಲ್ಲಿ ವಿವರಿಸಿದರು. ಶಿಬಿರಾರ್ಥಿಗಳು ವ್ಯಂಗ್ಯಚಿತ್ರ ರಚನೆಯ ವಿವಿಧ ಹಂತಗಳನ್ನು ಪ್ರಾಯೋಗಿಕವಾಗಿ ಕಲಿತುಕೊಂಡರು.

ಕಾರ್ಯಾಗಾರದಲ್ಲಿ ವಿವಿಧ ಪತ್ರಿಕಾ ತುಣುಕುಗಳ ಸಂಗ್ರಹಕಾರ ಅಜ್ಜಂಪುರ ಕೃಷ್ಣಮೂರ್ತಿ ಅವರ ಸಂಗ್ರಹದ ವಿವಿಧ ಪತ್ರಿಕೆ ನಿಯತಕಾಲಿಕೆಯಲ್ಲಿ ತೇಜಸ್ವಿ ಅವರ ಕುರಿತು ಪ್ರಕಟಗೊಂಡ ವರದಿ ಬರಹಗಳ ಪತ್ರಿಕಾ ತುಣುಕುಗಳ ಪ್ರದರ್ಶನ ನಡೆಸಲಾಯಿತು.

ಲೇಖಕರಾದ ನರಸಿಂಹಮೂರ್ತಿ ಹಳೇಹಟ್ಟಿ ಹಾಗೂ ಕಿಶೋರ್ ಚಿಂತಾಮಣಿ ಸಂಪಾದಕತ್ವದ ಕನ್ನಡದ ತೇಜಸ್ವು ಎಂಬ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಜೀವನಚಿತ್ರ ಹಾಗೂ ಸಾಹಿತ್ಯ ಚಿಂತನೆಯ ಕೃತಿ ಬಿಡುಗಡೆ ಮಾಡಲಾಯಿತು.

ಕಲಾವಿದರಾದ ರಕ್ಷಾ ಪೂಜಾರಿ, ದಿನೇಶ್ ಹೊಳ್ಳ, ಪತ್ರಿಕಾ ತುಣುಕುಗಳ ಸಂಗ್ರಹಕಾರ ಅಜ್ಜಂಪುರ ಕೃಷ್ಣಮೂರ್ತಿ, ಸಾಮಾಜಿಕ ಕಾರ್ಯಕರ್ತ ಸಂಜಯಗೌಡ ಕೊಟ್ಟಿಗೆಹಾರ, ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಸಂಯೋಜಕ ಪ್ರಜ್ವಲ್, ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್ ತರುವೆ ಮತ್ತು ಸಂಗೀತಾ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ನವದೀಪ್, ಕೀಟ ತಜ್ಞ ಡಾ.ಅವಿನಾಶ್, ಲೇಖಕ ಪೂರ್ಣೆಶ್ ಮತ್ತಾವರ, ಕಸಾಪ ನಿಕಟಪೂರ್ವ ಅಧ್ಯಕ್ಷ ಶಾಂತಕುಮಾರ್, ಕಲಾವಿದರಾದ ವಿಶ್ವಕರ್ಮ ಆಚಾರ್ಯ, ಹರ್ಷಕಾವಾ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!