ಕೊಟ್ಟಿಗೆಹಾರ: ಬಿ. ಹೊಸಹಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ಹುಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ತೀವ್ರ ಆತಂಕವನ್ನು ಉಂಟುಮಾಡುತ್ತಿದೆ. ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ ಈಗಾಗಲೇ ಬಿ. ಹೊಸಹಳ್ಳಿ ಗ್ರಾಮದಲ್ಲಿ ನೂರಕ್ಕೂ ಅಧಿಕ ರಾಸುಗಳು ಹುಲಿ ದಾಳಿಗೆ ಒಳಗಾಗಿರುವುದು ಗ್ರಾಮಸ್ಥರ ಜೀವನೋಪಾಯಕ್ಕೂ ಭಾರಿ ಹೊಡೆತ ನೀಡಿದೆ.
ನಾನು 2023ರಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷನಾಗಿ ಆಯ್ಕೆಯಾದ ನಂತರ ಸಾರ್ವಜನಿಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆಗಳನ್ನು ನಡೆಸಿ, ಭವಿಷ್ಯದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ಮನಗಂಡು ಹುಲಿಯನ್ನು ಸೆರೆ ಹಿಡಿಯುವಂತೆ ರಾಜ್ಯದ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಅಶ್ರಿತ್ ಗೌಡ ತಿಳಿಸಿದ್ದಾರೆ.
ಇದೀಗ ಅರಣ್ಯ ಇಲಾಖೆ ಸ್ಥಾಪಿಸಿರುವ ಕ್ಯಾಮೆರಾಗಳಲ್ಲಿ ಮತ್ತೆ ಹುಲಿಯ ಭಾವಚಿತ್ರಗಳು ಸೆರೆಯಾಗಿದ್ದು, ಗ್ರಾಮದ ಸುತ್ತಮುತ್ತ ಹುಲಿ ಇರುವಿಕೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮನುಷ್ಯನ ಮೇಲೆ ದಾಳಿ ಸಂಭವಿಸುವ ಮುನ್ನವೇ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರ ಜೀವ ಹಾಗೂ ಆಸ್ತಿಗೆ ರಕ್ಷಣೆ ಒದಗಿಸುವುದು ಅರಣ್ಯ ಇಲಾಖೆಯ ಜವಾಬ್ದಾರಿ ಎಂದು ತಿಳಿಸಿದ ಅಶ್ರಿತ್ ಗೌಡ, ವಿಳಂಬ ಧೋರಣೆ ಕೈಬಿಟ್ಟು ತ್ವರಿತ ಕಾರ್ಯಾಚರಣೆ ನಡೆಸಬೇಕೆಂದು ಒತ್ತಾಯಿಸಿದರು
