ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಇಂದಿನಿಂದ (ಡಿಸೆಂಬರ್ 8) ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಮೊದಲ ದಿನವೇ ಎಂಇಎಸ್ (MES) ಮತ್ತು ಶಿವಸೇನೆ ನಾಯಕರು ಗಡಿ ವಿವಾದ ಕೆರಳಿಸುವ ಯತ್ನ ನಡೆಸಿದ್ದಾರೆ. ಕರ್ನಾಟಕದಲ್ಲಿ ಇದ್ದುಕೊಂಡೇ ಕನ್ನಡ ವಿರೋಧಿ ಘೋಷಣೆಗಳನ್ನು ಕೂಗುವ ಮೂಲಕ ಅಧಿವೇಶನದ ವಿರುದ್ಧ ಮಹಾಮೇಳ ನಡೆಸಲು ಅವರು ವಿಫಲ ಪ್ರಯತ್ನ ಮಾಡಿದ್ದರಿಂದ, ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಎಂಇಎಸ್ ಮತ್ತು ಶಿವಸೇನೆ ಪ್ಲ್ಯಾನ್ ವಿಫಲ
ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರು ವ್ಯಾಕ್ಸಿನ್ ಡಿಪೋ ಬಳಿ ಒಗ್ಗೂಡಲು ಉದ್ದೇಶಿಸಿದ್ದರು. ಆದರೆ ಬೆಳಗಾವಿ ಜಿಲ್ಲಾಡಳಿತವು ಇದಕ್ಕೆ ಅವಕಾಶ ನೀಡಲಿಲ್ಲ. ವ್ಯಾಕ್ಸಿನ್ ಡಿಪೋ ಬಳಿ ಒಬ್ಬೊಬ್ಬರಾಗಿ ಬರುತ್ತಿದ್ದವರನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದುಕೊಂಡರು. ಈ ವೇಳೆ ಕೆಲ ಪುಂಡ ಮುಖಂಡರು ರಸ್ತೆ ಮೇಲೆ ಕುಳಿತು ಗದ್ದಲ ಎಬ್ಬಿಸಲು ಪ್ರಯತ್ನಿಸಿದರು ಮತ್ತು ನಾಡದ್ರೋಹಿ ಘೋಷಣೆಗಳನ್ನು ಕೂಗಿದರು. ಆದರೆ, ಇದಕ್ಕೆಲ್ಲ ಸೊಪ್ಪು ಹಾಕದ ಪೊಲೀಸರು ಅವರನ್ನು ನಿಯಂತ್ರಿಸಿ ವಶಕ್ಕೆ ಪಡೆದರು.
ಕರವೇ ಕಾರ್ಯಕರ್ತರ ಪ್ರತಿರೋಧ
ಎಂಇಎಸ್‌ನ ಈ ಪ್ರಯತ್ನಗಳ ಸುದ್ದಿ ತಿಳಿಯುತ್ತಿದ್ದಂತೆಯೇ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಸಿಡಿದೆದ್ದರು. ಅವರು ವ್ಯಾಕ್ಸಿನ್ ಡಿಪೋಗೆ ನುಗ್ಗಲು ಯತ್ನಿಸಿದಾಗ, ಪೊಲೀಸರು ಮಾರ್ಗ ಮಧ್ಯೆಯೇ ಅವರನ್ನು ತಡೆದರು. ಇದರಿಂದ ಪೊಲೀಸರು ಮತ್ತು ಕರವೇ ಕಾರ್ಯಕರ್ತರ ನಡುವೆ ಮಾತಿನ ವಾಗ್ವಾದ ನಡೆಯಿತು.
ಕೊಲ್ಲಾಪುರದಲ್ಲಿ ಪುಂಡಾಟ, ಅಥಣಿಯಲ್ಲಿ ತಿರುಗೇಟು
ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಕ್ಕೆ ಆಕ್ರೋಶಗೊಂಡ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಕಾರ್ಯಕರ್ತರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಗೂಂಡಾ ವರ್ತನೆ ತೋರಿದರು. ವಿಜಯ್ ದೇವಣೆ ನೇತೃತ್ವದಲ್ಲಿ ರಾಜ್ಯದ ಸರ್ಕಾರಿ ಬಸ್‌ಗಳನ್ನು ತಡೆದು, ಅವುಗಳ ಮೇಲೆ ‘ಜೈ ಮಹಾರಾಷ್ಟ್ರ’ ಎಂದು ಬರೆದಿರುವ ಸ್ಟಿಕ್ಕರ್‌ಗಳನ್ನು ಅಂಟಿಸಿದರು.
ಈ ಪುಂಡಾಟಕ್ಕೆ ತಿರುಗೇಟು ನೀಡಿದ ಕರವೇ ಕಾರ್ಯಕರ್ತರು, ಅಥಣಿಯಲ್ಲಿ ಮಹಾರಾಷ್ಟ್ರದ ಬಸ್‌ಗಳನ್ನು ತಡೆದರು ಮತ್ತು ಅವುಗಳ ಮೇಲೆ ಬಿಳಿ ಬಣ್ಣದಲ್ಲಿ ‘ಜೈ ಕರ್ನಾಟಕ’ ಎಂದು ಬರೆಯುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.
ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ
ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳನ್ನು ತಡೆಯುವ ಕೆಲಸ ನಡೆದ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರಕ್ಕೆ ಹೋಗುವ ರಾಜ್ಯದ ಎಲ್ಲ ಸರ್ಕಾರಿ ಬಸ್‌ಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕೊಲ್ಲಾಪುರ, ಪುಣೆ, ಮುಂಬಯಿ ಸೇರಿದಂತೆ ಹಲವೆಡೆ ಸಂಚರಿಸಬೇಕಿದ್ದ ಬಸ್‌ಗಳ ಸಂಚಾರ ರದ್ದಾಗಿದೆ. ಇದರಿಂದಾಗಿ ಎರಡೂ ರಾಜ್ಯಗಳ ನಡುವೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.
