ಚಿಕ್ಕಮಗಳೂರು: ನಗರದ ತಾಲೂಕು ಕಚೇರಿಯಲ್ಲಿ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಪೌತಿ ಖಾತೆ ಆಂದೋಲನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.ಫಲಾನುಭವಿಯೊಬ್ಬರಿಗೆ ದಾಖಲಾತಿ ನೀಡುವ ಮೂಲಕ ಸಚಿವರು ಚಾಲನೆ ದೊರೆಕಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಕಾರಣಾಂತರದಿಂದ ಪೌತಿ ಖಾತೆಗಳು ಹಲವಾರು ವರ್ಷಗಳಿಂದ ಹಾಗೆಯೇ ಉಳಿದುಹೋಗಿವೆ. ಪೌತಿಯಾದವರ ಖಾತೆಗಳು ಬದಲಾವಣೆ ಆಗಬೇಕಾಗಿರುವುದರಿಂದ ರೈತರು ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ 40 ವೃತ್ತಗಳಲ್ಲಿ ಈ ಪೌತಿ ಖಾತೆ ಆಂದೋಲನಗಳನ್ನು ಪ್ರಾರಂಭಿಸಲಾಗುವುದು.
ಹಾಗೆ 9,11,000 ಜಮೀನು ಹೊಂದಿದವರಿದ್ದು, ಸುಮಾರು 5.50 ಲಕ್ಷ ಪಹಣಿ ಪತ್ರಗಳಿವೆ. ಅವುಗಳಿಗೆ ಆಧಾರ್ ಜೋಡಿಸುವ ಸಂದರ್ಭದಲ್ಲಿ 97, 000 ಮಾಲೀಕರು ಪೌತಿಯಾಗಿರುವುದು ಗಮನಕ್ಕೆ ಬಂದಿದೆ. ಇದರಿಂದಾಗಿ ಒಂದು ಖಾತೆಗೆ ಒಬ್ಬರು ಮಾಲೀಕರು ಇದ್ದು, ಅವರಿಗೆ ಅಗತ್ಯ ಸೌಲಭ್ಯಗಳು ಸಿಗುವಂತಾಗಬೇಕು. ಆದರೆ ಅನೇಕ ಸೌಲಭ್ಯಗಳನ್ನು ಪೌತಿಯಾಗಿರುವವರ ಹೆಸರಿನಲ್ಲೇ ವಿತರಿಸುತ್ತಿದ್ದೇವೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಇದೀಗ ಆಂದೋಲನ ಆರಂಭಿಸಲಾಗಿದೆ. ಯಾವುದೇ ಕಾರಣಕ್ಕೂ ರೈತರು ಪೌತಿ ಖಾತೆ ಬದಲಾವಣೆಗೆ ಹಣ ಪಾವತಿಸುವ ಅಗತ್ಯವಿಲ್ಲ. ಗ್ರಾಮಲೆಕ್ಕಿಗರೇ ಈ ಕಾರ್ಯ ಮಾಡಿಕೊಡುತ್ತಾರೆ ಎಂದು ತಿಳಿಸಿದರು.
ಈಗಾಗಲೇ 300ಕ್ಕೂ ಕಂದಾಯ ಗ್ರಾಮಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದ್ದು, ಈ ಎಲ್ಲಾ ಕಾರ್ಯಗಳಿಗೆ ಪೂರಕವಾಗಿ ಆಯ್ದ ಗ್ರಾಮ ಲೆಕ್ಕಿಗರನ್ನು ಪೌತಿ ಖಾತೆ ಆಂದೋಲನವನ್ನು ನಡೆಸಲಾಗುವುದು ಎಂದು ಹೇಳಿದರು.
ಈ ವೇಳೆ ಶಾಸಕ ಹೆಚ್.ಡಿ.ತಮ್ಮಯ್ಯ, ಜಿ.ಪಂ. ಸಿಇಒ ಎಚ್.ಎಸ್.ಕೀರ್ತನಾ, ತಹಸೀಲ್ದಾರ್ ರೇಷ್ಮಾ ಶೆಟ್ಟಿ, ಉಪತಹಸೀಲ್ದಾರ್ ರಾಮರಾವ್ ದೇಸಾಯಿ ಕಾರ್ಯಕ್ರಮದಲ್ಲಿದ್ದರು.