ಚಿಕ್ಕಮಗಳೂರು: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗುತ್ತಿರುವುದಕ್ಕೆ ಸರ್ಕಾರದ ವಿವಿಧ ವಸತಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದು ಪ್ರಮುಖ ಕಾರಣವಾಗಿದೆ ಎಂದು ಶಾಸಕಿ ನಯನ ಮೋಟಮ್ಮ ತಿಳಿಸಿದರು.

ಅವರು ಇಂದು ಮಳಲೂರು, ಅಂಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಳೆ ಗ್ರಾಮದಲ್ಲಿ ಸುಮಾರು 22 ಕೋಟಿ ರೂ ವೆಚ್ಚದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಮೊರಾರ್ಜಿ, ಆಶ್ರಮ, ಡಾ. ಬಿ.ಆರ್. ಅಂಬೇಡ್ಕರ್ ಮುಂತಾದ ವಸತಿ ಶಾಲೆಗಳಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕೂಲಿ ಕಾರ್ಮಿಕರ ಬಡ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕೆಂದು ಬಯಸುತ್ತಿದ್ದಾರೆಂದು ವಿವರಿಸಿದರು.
ಹಾಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಸಮಾಜ ಕಲ್ಯಾಣ ಇಲಾಖೆ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇವರ ವತಿಯಿಂದ ನಡೆಯುತ್ತಿದ್ದ ವಸತಿ ಶಾಲೆಗೆ ಇಂದು ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಈ ನಿಟ್ಟಿನಲ್ಲಿ ವಸತಿ ಶಾಲೆಗಳ ಪ್ರಾರಂಭಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿದೆ ಎಂದರು.
ಇನ್ನೊಂದು ವರ್ಷದಲ್ಲಿ ಈ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕ ಲೋಕಾರ್ಪಣೆಯಾಗಲಿದೆ ಎಂದು ಭರವಸೆ ನೀಡಿದ ಅವರು, ತಾವು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುವುದರ ಜೊತೆಗೆ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಸಿ ಮಲೆನಾಡಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂದು ಗುರಿಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ವಿ. ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಾಲತಿ, ಕ್ರೈಸ್ ಸಂಸ್ಥೆಯ ಎಇಇ ರಾಮು ಗ್ಯಾರಂಟಿ ಯೋಜನೆಯ ಸದಸ್ಯ ಬಸವರಾಜ್, ಅಂಬಳೆ ಗ್ರಾಪಂ ಅಧ್ಯಕ್ಷ ದೊಡ್ಡೇಗೌಡ, ಮಳಲೂರು ಗ್ರಾಪಂ ಅಧ್ಯಕ್ಷೆ ಮೇದನಿ ದೇವಿಕ, ಉಪಾಧ್ಯಕ್ಷೆ ಶ್ವೇತಾ ಪದ್ಮೇಗೌಡ, ಪ್ರಾಂಶುಪಾಲ ನಾಗೇಶ್, ಎಂ.ಡಿ.ರವಿ, ಬೀಮಯ್ಯ, .ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಪ್ರಾಂಶುಪಾಲ ನಾಗೇಶ್ ಸ್ವಾಗತಿಸಿದರು.