ಜಯಪುರ: ಕಳೆದ ವರ್ಷ ಸುರಿದ ಭಾರೀ ಮಳೆಗೆ ಜಯಪುರದಿಂದ ಬಸರೀಕಟ್ಟೆ ಸಂಪರ್ಕಿಸುವ ಬಿಳಾಲುಕೊಪ್ಪ ಬಳಿ ಹಳ್ಳದ ನೀರು ರಸ್ತೆಯಲ್ಲೆ ಹರಿದು ಹೋಗಿ ರಸ್ತೆ ಹಾಗೂ ಚರಂಡಿ ಕೊಚ್ಚಿಹೋಗಿತ್ತು.

ಆಗ ಸ್ಥಳಕ್ಕೆ ಆಗಮಿಸಿದ್ದ ಸಂಸದರು, ಜಿಲ್ಲಾಧಿಕಾರಿಗಳು, ಶಾಸಕರು ಸ್ಥಳಕ್ಕೆ ಭೇಟಿಯನ್ನು ನೀಡಿದ್ದರು, ಆದರೂ ರಸ್ತೆ ಸರಿಪಡಿಸುವುದು ಬಿಡಿ ಸರಿಯಾದ ಚರಂಡಿಯ ವ್ಯವಸ್ಥೆಯೂ ಆಗದೆ ಹಾಗೆ ಇದೆ.
ಕಳೆದ ವರ್ಷ ಸುರಿದ ಮಳೆಗೆ ಚರಂಡಿಗಳು ಕೊರೆದು ಹೋಗಿದ್ದು, ಈ ಭಾರೀ ಚರಂಡಿ ಜೊತೆಗೆ ರಸ್ತೆಯೂ ಬಿರುಕು ಬಿಟ್ಟು ಕುಸಿಯುವ ಭೀತಿ ಎದುರಾಗಿದೆ.
ಅದು ಅಲ್ಲದೇ ಮಳೆ ಬಂದಾಗ ರಸ್ತೆಯಲ್ಲೆ ಹರಿಯುವ ನೀರಿನಿಂದ ರಸ್ತೆ ಪಕ್ಕದಲ್ಲಿ ದೊಡ್ಡ ಕಂದಕವೂ ಸೃಷ್ಟಿಯಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಹೊರನಾಡು-ಶೃಂಗೇರಿಯ ಮುಖ್ಯ ರಸ್ತೆಯು ಇದಾಗಿದ್ದು ನಿತ್ಯ ಸಂಚರಿಸುವ ವಾಹನ ಸವಾರರಿಗೂ ಈ ರಸ್ತೆ ಸವಾಲಾಗಿದೆ.