ಮೂಡಿಗೆರೆ: ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವಿವಿಧ ಸಂಘ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಪಟ್ಟಣದ ಅಡ್ಯಾಂತಯ ರಂಗಮಂದಿರದಲ್ಲಿ ಅಪಾರ ಗೌರವದೊಂದಿಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅದ್ದೂರಿಯಾಗಿ ಆಚರಿಸಲಾಯಿತು
ಈ ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ ಸಂಸ್ಕೃತಿ ಚಿಂತಕರಾದ ಮರಗುಂದ ಪ್ರಸನ್ನ ಗೌಡ ಮಾತನಾಡಿ ಸಂವಿಧಾನ ದಿನ ಭಾರತದ ಜನತೆಯಾದ ನಾವು ನಮ್ಮ ಸಂವಿಧಾನದ ರಚನೆ, ಮಹತ್ವ ನಮ್ಮಲ್ಲಿ ಎಷ್ಟು ಜನರಿಗೆ ಗೊತ್ತಿದೆ? ಎಂಬುದಾಗಿ ಪ್ರಶ್ನಿಸುತ್ತ ಮಾತು ಆರಂಭಿಸಿದರು
ಸಂವಿಧಾನ ರಚನಾ ಸಭೆಯ 2 ವರ್ಷ 11 ತಿಂಗಳು 18 ದಿನಗಳ ಕಠಿಣ ಪರಿಶ್ರಮ ಸಾರ್ಥಕದ ಸಂಕೇತವೇ ಇಂದು ಭಾರತವು ತನ್ನದೇ ಆದ ಒಂದು ಸಂವಿಧಾನವನ್ನು ಪಡೆದಿದೆ
ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಆರ್.ಅಂಬೇಡ್ಕರ್ ಅವರು ಈ ಸಂವಿಧಾನದ ಮೂಲ ಕರಡನ್ನು ಸಭಾಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಅವರ ಕೈಗೆ ಹಿಂದಿನ ದಿನವಷ್ಟೇ ಒಪ್ಪಿಸಿದ್ದರು. ಭಾರತದ ಮೊದಲ ಸಂಸತ್ತು ಆಗಿದ್ದ ಸಭೆಯ ಎಲ್ಲ ಸದಸ್ಯರು ಇದಕ್ಕೆ ಸಹಿ ಹಾಕುವ ಮೂಲಕ ನವೆಂಬರ್ 26ರಂದು ಇದನ್ನು ‘ಭಾರತ ಸಂವಿಧಾನ’ ಎಂಬುದಾಗಿ ಅಂಗೀಕರಿಸಲಾಯಿತು ಎಂಬುದಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು
ನಾವು ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವಗಳನ್ನು ಆಚರಣೆ ಮಾಡುತ್ತಿದ್ದೆವು. ಸಂವಿಧಾನ ದಿನವನ್ನು ಆಚರಿಸುತ್ತಿರಲಿಲ್ಲ. ಭಾರತ ಸರ್ಕಾರವು 2015ರಿಂದ, ಈ ಮೊದಲು ರಾಷ್ಟ್ರೀಯ ಕಾನೂನು ದಿನ ಎಂದು ಗುರುತಿಸಲ್ಪಟ್ಟಿದ್ದ ನವೆಂಬರ್ 26 ಅನ್ನು ಸಂವಿಧಾನ ದಿನ ಎಂದು ಘೋಷಿಸಿತು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ 2015ರಲ್ಲಿ ಮೊದಲ ಸಂವಿಧಾನ ದಿನವನ್ನು ಆಚರಿಸಲಾಯಿತು.
ಬಹು ಜಾತಿ, ಧರ್ಮ, ಸಂಸ್ಕೃತಿ, ಭಾಷೆ ಇತ್ಯಾದಿಗಳ ಬೃಹತ್ ದೇಶವಾದ ಭಾರತಕ್ಕೆ ಒಂದು ಸತ್ವಯುತವಾದ, ಸುಸ್ಥಿರವಾದ ಸಂವಿಧಾನವನ್ನು ರಚಿಸುವುದು ಸುಲಭದ ಕೆಲಸವಾಗಿರಲಿಲ್ಲ ಈ ಕಾರ್ಯ ಸಾಧಿಸಲು ಅಂಬೇಡ್ಕರ್ ಪಡೆದ ಶಿಕ್ಷಣದಿಂದ ಸಾಧ್ಯವಾಯಿತು ಎಂದರು
ಅಂಬೇಡ್ಕರ್ ಅವರು ವ್ಯಾಪಕವಾದ ಸಂಶೋಧನೆ, ಬಿರುಸಿನ ಚರ್ಚೆ ನಡೆಸಿ ಬೆಟ್ಟದಷ್ಟು ಸಾಮಾಗ್ರಿಯನ್ನು ಗುಡ್ಡೆ ಹಾಕಿದರು. ಅದಕ್ಕೆ, ನಾವೀಗ ನೋಡುತ್ತಿರುವ ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾದ ಭಾರತ ಸಂವಿಧಾನದ ರೂಪವನ್ನು ಕೊಟ್ಟಿದ್ದು, ಕರಡು ರಚನಾ ಸಭೆಯ ಅಧ್ಯಕ್ಷರಾದ ಡಾ. ಬಿ.ಆರ್.ಅಂಬೇಡ್ಕರ್. ಅದಕ್ಕೇ ಈ ದೇಶದ ಜನ ಅವರನ್ನು ಪ್ರೀತ್ಯಾದರಗಳಿಂದ ‘ಸಂವಿಧಾನ ಶಿಲ್ಪಿ’ ಎಂದು ಕರೆಯುತ್ತಾರೆ.
ವಿಪರ್ಯಾಸದ ಸಂಗತಿಯೆಂದರೆ, ಸಂವಿಧಾನವನ್ನು ನಮ್ಮದು ಎಂದು ಒಪ್ಪಿಕೊಂಡು ಹಲವು ವರ್ಷವಾಗಿದ್ದರೂ ಇದರ ಪ್ರಮುಖ ಬಾಧ್ಯಸ್ಥರಾದ ಭಾರತೀಯರಾದ ನಮ್ಮಲ್ಲಿ ಎಷ್ಟು ಜನರಿಗೆ ಭಾರತ ಸಂವಿಧಾನದ ರಚನೆ, ಮಹತ್ವ ಗೊತ್ತಿದೆ? ಈವರೆಗೆ ಆಗದೇ ಇದ್ದು ಈಗ ತುರ್ತಾಗಿ ಆಗಬೇಕಾಗಿದೆ ಎಂದರು
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತಾನಾಡಿದ ದಂಡಧಿಕಾರಿ ಶ್ರೀಮತಿ ಅಶ್ವಿನಿ, ದೇಶ ಕಟ್ಟುವ ಯುವ ಪೀಳಿಗೆ ಸಂವಿಧಾನವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ನಾರಿಯರನ್ನು ಪೂಜಿಸುವುದು ಬೇಡ ಅವಕಾಶ ಕಲ್ಪಿಸಿ ಎಂಬುದನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ. 32 ಪದವಿ ಪಡೆದ ಅಂಬೇಡ್ಕರ್ ಸಂವಿಧಾನ ಮಾತ್ರ ರಚಿಸದೆ ಅನೇಕ ಕೊಡುಗೆಗಳನ್ನ ನೀಡಿದ್ದಾರೆ. ಯುವ ಜನತೆ ಶಿಕ್ಷಣ ಪಡೆದು ಸಂಘತಿಕರಾಗಿ ಎಂಬುದನ್ನು ಅಂಬೇಡ್ಕರ್ ತಿಳಿಸಿದ್ದರು. ಸಮಾಜ ಬದಲಾಯಿಸಲು ಶಿಕ್ಷಣ ಅತ್ಯವಶ್ಯಕ ಎಂದರು.ಸಮಾನತೆ ಸ್ವತಂತ್ರ ಪ್ರತಿಪಾದಿಸಿರುವ ಅಂಬೇಡ್ಕರ್ ಅವರ ನಮ್ಮ ಬದುಕಿನಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು ಮೊದಲು ಭಾರತೀಯ ಕೊನೆಯದಾಗಿ ಭಾರತೀಯ ಎಂಬುದಾಗಿ ತಿಳಿಸಿದರು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಮತಿ ದಯಾವತಿ ಎಂ. ಅವರು, ಭಾರತೀಯ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾದದ್ದು. ನಾವೆಲ್ಲರೂ ಇದನ್ನು ಪಾಲಿಸುತ್ತ ಭವ್ಯ ಭಾರತ ನಿರ್ಮಾಣಕ್ಕೆ ಶ್ರಮಿಸೋಣ ಎಂದರು ಯುವ ಪೀಳಿಗೆ ಸಂವಿಧಾನ ಅರಿತು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮೀನಾಕ್ಷಿ, ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಸರಸ್ವತಿ ಷಣ್ಮುಖ ಸುಂದರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರಪ್ಪ, ತಾಲೂಕು ನೌಕರರ ಸಂಘದ ಅಧ್ಯಕ್ಷ ನವೀನ್ ಕುಮಾರ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ್ ಹೊಸಕೆರೆ, ಛಲವಾದಿ ಸಂಘಟನೆ ಅಧ್ಯಕ್ಷ ಮಂಜುನಾಥ್ ಬೆಟ್ಟಗೆರೆ, ಬಹುಜನ ಸಮಾಜ ಪಕ್ಷ ತಾಲೂಕು ಅಧ್ಯಕ್ಷ ರಮೇಶ್ ಲೋಕುವಳ್ಳಿ, ದಲಿತ ಸಂಘ ಸಮಿತಿ ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು ಸೇರಿದಂತೆ ವಿವಿಧ ಸಂಘಟನೆ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಶಾಲಾ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.
ವರದಿ :ಪುನೀತ್ ಕಡಿದಾಳು
9483811948
