ಮೂಡಿಗೆರೆ: ತಾಲೂಕಿನ ಗೋಣಿಬೀಡು ವ್ಯಾಪ್ತಿಯ ಜಿ. ಹೊಸಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಗುಂಪು ದಾಳಿ ನಡೆಸಿ ಎರಡು ಎಕರೆಯಲ್ಲಿ ಬೆಳೆದಿದ್ದ ಭತ್ತದ ಬೆಳೆಯನ್ನು ಧ್ವಂಸಗೊಳಿಸಿವೆ.

ರೈತರು ಬೆಳೆದಿದ್ದ ಭತ್ತದ ಬೆಳೆ ಧ್ವಂಸವಾಗಿದ್ದು, ಘಟನೆಯಲ್ಲಿ ₹50 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಗ್ರಾಮದಲ್ಲಿ ಹಲವಾರು ರೈತರ ಬಾಳೆ, ತೆಂಗಿನ ಸಸಿಗಳು, ಅಡಿಕೆ ಕಾಫಿ ಗಿಡ ಮುಂತಾದವುಗಳ ಮೇಲೂ ಕಾಡಾನೆಗಳು ದಾಳಿ ನಡೆಸಿವೆ.
ಗ್ರಾಮದ ಹೊರವಲಯದ ಕಾಡಿನಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಬೀಡು ಬಿಟ್ಟಿರುವ ಆನೆಗಳು ಹಗಲಿನ ವೇಳೆಯಲ್ಲಿ ಕಾಡಿನಲ್ಲಿದ್ದು ಸಂಜೆಯಾಗುತ್ತಲೇ ಹೊರಗೆ ಬಂದು ರೈತರ ಬೆಳೆಗಳ ಮೇಲೆ ದಾಳಿ ನಡೆಸುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಳೆ ನಷ್ಟಕ್ಕೆ ಪರಿಹಾರವೂ ಸಿಗುತ್ತಿಲ್ಲ. ಇದರಿಂದ ಈ ಭಾಗದ ರೈತರು ಕಂಗಾಲಾಗುವಂತಾಗಿದೆ ಎಂದು ಗ್ರಾಮಸ್ಥರು ವಿವರಿಸುತ್ತಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟಲು ಶಾಶ್ವತ ಪರಿಹಾರ ಕೈಗೊಳ್ಳಬೇಕು. ಈ ಭಾಗದ ರೈತರ ಬೆಳೆಗಳನ್ನು ಉಳಿಸಬೇಕು ಎಂದು ಜಿ ಹೊಸಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ :ಪುನೀತ್ ಕಡಿದಾಳು
9483811948
