Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ: ಗುರುಗಳ ಮಾರ್ಗದರ್ಶನ ಪಾಲನೆಯಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ: ಮಾಜಿ ಸಚಿವೆ ಮೋಟಮ್ಮ

ಮೂಡಿಗೆರೆ: ಗುರುಗಳ ಮಾರ್ಗದರ್ಶನ ಪಾಲನೆಯಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ: ಮಾಜಿ ಸಚಿವೆ ಮೋಟಮ್ಮ

ಮೂಡಿಗೆರೆ: ಪ್ರಸಕ್ತ ಕಾಲಘಟ್ಟದಲ್ಲಿ ಶಿಕ್ಷಣ ಪಡೆಯಲು ಉತ್ತಮ ವ್ಯವಸ್ಥೆ ಇದೆ. ಅದನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟಲು ಗುರುಗಳ ಮಾರ್ಗದರ್ಶನ ಪಾಲನೆ ಮಾಡುವುದರ ಜೊತೆಗೆ ಶ್ರಮಿಸಬೇಕೆಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.

ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲೆ ವಿಭಾಗದ ಶಾಲೆ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಜತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಮೊಬೈಲ್‌ನಿಂದ ಆರೋಗ್ಯ ಮತ್ತು ಕಣ್ಣು ಹಾಳಾಗುತ್ತಿದ್ದು, ಈ ಬಗ್ಗೆ ಪೋಷಕರು ಎಚ್ಚರವಹಿಸಬೇಕು. ಉನ್ನತ ಹುದ್ದೆ ಅಲಂಕರಿಸಿದ ಹಾಗೂ ಸಾಧನೆ ಮಾಡಿದವರ ಇತಿಹಾಸ ನೋಡಿದರೆ ಅವರೆಲ್ಲಾ ಸರಕಾರಿ ಶಾಲೆಯಲ್ಲಿ ಓದಿದವರಾಗಿದ್ದಾರೆ ಹಾಗಾಗಿ ಸರಕಾರಿ ಶಾಲೆ ಬಗ್ಗೆ ಇರುವ ಕೀಳರಿಮೆ ಮನೋಭಾವ ಬಿಡಬೇಕೆಂದು ಹೇಳಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಪಟ್ಟಣದಲ್ಲಿ ಹಿಂದೆ ಖಾಸಗಿ ಶಾಲೆ ಬೆರಳೆಣಿಕೆಯಷ್ಟು ಇತ್ತು. ಇದೀಗ ಖಾಸಗಿ ಶಾಲೆಗಳೆ ಅಧಿಕವಾಗಿದೆ. ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದ್ದರೂ, ಶಿಕ್ಷಣದ ದ್ವಂದ್ವ ನೀತಿಯಿಂದ ಪೋಷಕರು ಖಾಸಗಿ ಶಾಲೆ ಬಗ್ಗೆ ಹೆಚ್ಚಾಗಿ ಒಲವು ತೋರುತ್ತಿದ್ದಾರೆ. ಇದರಿಂದ ಸರಕಾರಿ ಶಾಲೆ ಮುಚ್ಚುವ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಅವಕಾಶ ಕೊಡಬಾರದು. ಈ ಶಾಲೆ 75 ವರ್ಷ ಪೂರೈಸಿದ್ದು, ಅಮೃತ ಮಹೋತ್ಸವಕ್ಕೆ ಸಿದ್ದವಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಎಂ.ಎಸ್.ಅನಂತ್ ವಹಿಸಿದ್ದರು. ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಬಿಇಒ ಮೀನಾಕ್ಷಿ, ಶಾಲೆ ಉಪ ಪ್ರಾಂಶುಪಾಲ ಜಗದೀಶ್ ನಾಯಕ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹೇಮಂತಚಂದ್ರ, ಹಳೇ ವಿದ್ಯಾರ್ಥಿಗಳಾದ ಎಂ.ಎಲ್.ಸುನೀಲ್, ಹಾಲಪ್ಪ, ಪರಮೇಶ್ ಮತ್ತಿತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!