ಮೂಡಿಗೆರೆ: ಬಣಕಲ್ ಉರ್ದು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಭ್ರಮ ಮತ್ತು ಸಡಗರದ ವಾತಾವರಣದಲ್ಲಿ ನೆರವೇರಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜರೀನಾ ಅವರು ಬಲೂನ್ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ಇದ್ರೀಸ್ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣ ಮಾಡಿದ ಅವರು ಶಾಲೆಯ ಶೈಕ್ಷಣಿಕ ಪ್ರಗತಿಯನ್ನು ಶ್ಲಾಘಿಸಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಾಲೆಯ ಅಭಿವೃದ್ಧಿಗೆ ಎಸ್‌ಡಿಎಂಸಿ ಸದಾ ಬೆಂಬಲವಾಗಿರುತ್ತದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಣಕಲ್ ಠಾಣೆಯ ಠಾಣಾಧಿಕಾರಿ ರೇಣುಕಾ ಅವರು ಮಾತನಾಡಿ “ಉತ್ತಮ ಶಿಕ್ಷಣವೇ ವ್ಯಕ್ತಿತ್ವ ನಿರ್ಮಾಣಕ್ಕೆ ಆಧಾರ” ಎಂದು ಹೇಳಿ, ವಿದ್ಯಾರ್ಥಿಗಳು ಶಿಸ್ತಿನ ಜೀವನ ನಡೆಸಿ ಗುರಿ ಸಾಧನೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಟಿ.ಎ. ಖಾದರ್ ಹಾಜಿ ಅವರು ಶಿಕ್ಷಣವೇ ಸಮಾಜ ಪರಿವರ್ತನೆಯ ಶಕ್ತಿ ಎಂದು ಅಭಿಪ್ರಾಯಪಟ್ಟರೆ, ಮಾಜಿ ಸೈನಿಕ ದಿನೇಶ್ ದೇಶಸೇವೆ ಮತ್ತು ಶಿಸ್ತಿನ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಡಾ. ಇಕ್ಲಾಸ್ ಅಹಮದ್, ಡಾ. ಅಸ್ಮಾ ಪರ್ವೀನ್ ಹಾಗೂ ಅರೀಫ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಮವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ರೇಷ್ಮಾ ಸ್ವಾಗತಿಸಿದರು. ಶಾಲಾ ವರದಿಯನ್ನು ಕನ್ನಡ ಶಿಕ್ಷಕಿ ವಿ. ಸಲೀನ ವಾಚಿಸಿದರು. ತಮ್ಮ ವರದಿಯಲ್ಲಿ ವಿದ್ಯಾರ್ಥಿಗಳು ಗಿಡಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶೇಖ್ ಇರ್ಫಾನ್, ಬಣಕಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್, ಗೌಸ್ ಮೊಹಿದ್ದಿನ್, ಸಿಆರ್‌ಪಿ ಸಾಹಿರಾ ಬಾನು, ಎಜಾಸ್ ಅಹಮದ್, ಎಸ್‌ಡಿಎಂಸಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪೋಷಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
