ಮೂಡಿಗೆರೆ: ಮಂಗಳೂರು–ಚಿಕ್ಕಮಗಳೂರು ಸಂಪರ್ಕಿಸುವ ಪ್ರಮುಖ ಚಾರ್ಮಾಡಿ ಘಾಟ್‌ನಲ್ಲಿ ಸರ್ಕಾರಿ ಬಸ್ ಹೌಸಿಂಗ್ ಕಟ್ಟಾಗಿ ರಸ್ತೆ ಮಧ್ಯೆ ನಿಂತ ಘಟನೆ ಸಂಭವಿಸಿದ್ದು, ಪರಿಣಾಮವಾಗಿ ಕೆಲಕಾಲ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು.
ಮಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ KA-19-F-3135 ಸಂಖ್ಯೆಯ ಬಸ್, ಚಾರ್ಮಾಡಿ ಘಾಟ್‌ನ ಅಣ್ಣಪ್ಪ ಸ್ವಾಮಿ ದೇವಸ್ಥಾನದ ಸಮೀಪ ತಾಂತ್ರಿಕ ದೋಷದಿಂದ ಹೌಸಿಂಗ್ ಕಟ್ಟಾಗಿ ಚಲನೆ ನಿಲ್ಲಿಸಿತು. ಇದರಿಂದ ಕಿರಿದಾದ ಘಾಟ್ ರಸ್ತೆಯಲ್ಲಿ ಎರಡೂ ದಿಕ್ಕಿನ ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಘಟನೆ ಸ್ಥಳದಲ್ಲಿ ಕಾರು, ಲಾರಿ, ದ್ವಿಚಕ್ರ ವಾಹನಗಳು ಸಿಲುಕಿಕೊಂಡು ಪ್ರಯಾಣಿಕರು ಮತ್ತು ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸಿದರು.
ಚಾರ್ಮಾಡಿ ಘಾಟ್ ಮಂಗಳೂರು ಹಾಗೂ ಮಲೆನಾಡು ಪ್ರದೇಶವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ಇಂತಹ ತಾಂತ್ರಿಕ ದೋಷಗಳಿಂದ ಸಂಚಾರಕ್ಕೆ ಮರು ಅಡಚಣೆ ಉಂಟಾಗುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
