ಮೂಡಿಗೆರೆ: ಮಲೆನಾಡಿನ ವಿಭಿನ್ನ ಹಾಗೂ ವಿಶಿಷ್ಟವಾದ ಆಚರಣೆಗಳು, ಆಹಾರ ಪದ್ಧತಿಗಳು, ಜೀವನ ಶೈಲಿ, ಸಂಸ್ಕೃತಿ ಮತ್ತು ಜಾನಪದ ಕಲೆ,ಶೈಲಿಗಳನ್ನು ಮುಂದಿನ ಪೀಳಿಗೆಗೆ ತಲುಪಿಸಿ ಉಳಿಸುವ ಅವಶ್ಯಕತೆ ಮತ್ತು ಜವಾಬ್ದಾರಿ ನಮ್ಮದಾಗಿದೆ ಎಂದು ಮಾಜಿ ಸಚಿವೆ ಡಾ.ಮೋಟಮ್ಮ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ಜೀವನ ಶೈಲಿಯ ಪರಿಣಾಮವಾಗಿ ಜನರ ಆಹಾರ ಪದ್ಧತಿ ಮತ್ತು ಜೀವನದ ರೀತಿ ನೀತಿಗಳು ಬಹಳ ಮಟ್ಟಿಗೆ ಬದಲಾಗಿವೆ ಎಂದು ವಿಷಾದಿಸಿದರು. ಹಳೆಯ ಕಾಲದ ಕಳಲೆ, ಕೆಸ, ಏಡಿ ಮುಂತಾದ ಆರೋಗ್ಯಕರ ಆಹಾರ ಪದ್ಧತಿಗಳ ಬದಲಾಗಿ ಇಂದಿನ ಯುವಜನತೆ ಪಿಜ್ಜಾ, ಬರ್ಗರ್ ಮುಂತಾದ ಆಧುನಿಕ ಆಹಾರಗಳಿಗೆ ಹೆಚ್ಚು ಒಲವು ತೋರಿಸುತ್ತಿದ್ದು, ಇದರಿಂದ ಆರೋಗ್ಯದ ಮೇಲೆ ದುಷ್ಪಾರಿಣಾಮ ಉಂಟಾಗುತ್ತಿದೆ ಎಂದು ಹೇಳಿದರು.

ಹಿರಿಯರು ಅನುಸರಿಸುತ್ತಿದ್ದ ಆರೋಗ್ಯಕರ ಆಹಾರ ಪಧ್ಧತಿ ಮತ್ತು ಜೀವನ ಶೈಲಿಯನ್ನು ಇಂದಿನ ತಲೆಮಾರು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಏಪ್ರಿಲ್ 3 ರ ಶುಕ್ರವಾರ ಮೂಡಿಗೆರೆ ಅಡ್ಯಾಂತಾಯ ರಂಗಮಂದಿರದಲ್ಲಿ “ಮಲೆನಾಡು ಮಹಿಳಾ ಸುಗ್ಗಿ ಉತ್ಸವ – ಹಿರಿಯರ ಜೀವನೋತ್ಸವ ಸಂಭ್ರಮ” ಎಂಬ ವಿಶಿಷ್ಟ ಮತ್ತು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಳಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಮಂಚೇಗೌಡ ಮಾತನಾಡಿ, ಹಿರಿಯರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆದರ್ಶ ಹಿರಿಯ ದಂಪತಿ ಸ್ಪರ್ಧೆ, ಆಟೋಟ ಸ್ಪರ್ಧೆಗಳು ಹಾಗೂ ಹಿರಿಯರ ಪ್ರತಿಭೆಯನ್ನು ಗುರುತಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಕಾರ್ಯಕ್ರಮಕ್ಕೆ ಹಾಸ್ಯ ಕಲಾವಿದರಾದ ಗೋಪಾಲ್,ಹೆಚ್ ಪದ್ಮಶ್ರೀ ಪುರಸ್ಕೃತರಾದ ಶ್ರೀಮತಿ ಸುಶೀಲಮ್ಮ. ಸಮೃದ್ದಿ ಹೀಲಿಂಗ್ ಹಾಗೂ ಔಷಧ ರಹಿತ ಚಿಕಿತ್ಸಾ ಸಂಸ್ಥೆಯ ಸಂಸ್ಥಾಪಕರಾದ ಪೂರ್ವಿ ಜಯರಾಜ್. ಹೆಸರಾಂತ ರೂಪದರ್ಶಿ ಶ್ರೀಮತಿ ರೇಷ್ಮಾ ಇತರ ಗಣ್ಯರು ಅಗಮಿಸುತ್ತಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದ ಸಂಚಾಲಕರಾದ ಅಶ್ವಿನಿ ಸಂತೋಷ್ ಉಪಸ್ಥಿತರಿದ್ದರು.
