Sunday, March 15, 2026
Homeಜಿಲ್ಲಾಸುದ್ದಿಮೂಡಿಗೆರೆ: ಅಯೋಧ್ಯ ಪ್ರಭು ಶ್ರೀರಾಮನನ್ನು ಅಪಪ್ರಚಾರ ಮಾಡುವುದು ಕಾಂಗ್ರೆಸ್ ನವರ ಚಾಳಿ: ಸಂಸದ ಕೋಟ ಶ್ರೀನಿವಾಸ...

ಮೂಡಿಗೆರೆ: ಅಯೋಧ್ಯ ಪ್ರಭು ಶ್ರೀರಾಮನನ್ನು ಅಪಪ್ರಚಾರ ಮಾಡುವುದು ಕಾಂಗ್ರೆಸ್ ನವರ ಚಾಳಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಮೂಡಿಗೆರೆ: ವಿಬಿಜಿ ರಾಮ್ ಯೋಜನೆ ಸಮಗ್ರ ಭಾರತದ ಅಭಿವೃದ್ಧಿಗೆ ರೂಪುಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪಟ್ಟಣದ ವಿವಿಧ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ನಂತರ ಲಯನ್ಸ್ ವೃತ್ತದಲ್ಲಿ ಮಾತನಾಡಿದ ಅವರು, ರಾಮನ ಬಗ್ಗೆ ಅಪಪ್ರಚಾರ ಮಾಡುವುದು ಕಾಂಗ್ರೆಸ್ ಸರ್ಕಾರದ ಚಾಳಿಯಾಗಿದೆ ಎಂದು ಆರೋಪಿಸಿದರು. ರಾಮ ಇಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಿದ್ದ ಕಾಂಗ್ರೆಸ್ ಸರ್ಕಾರ ಈಗಲೂ ರಾಮನ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ ಎಂದು ಹೇಳಿದರು.

ವಿಬಿಜಿ ರಾಮ್ ಯೋಜನೆಯ ಸತ್ಯವನ್ನು ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ವಿವರಿಸುವಾಗ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಭಾತ್ಯಾಗ ಮಾಡಿರುವುದು ಜನರಿಗೆ ಎಲ್ಲವನ್ನೂ ತಿಳಿಯುವಂತೆ ಮಾಡಿದೆ ಎಂದು ಅವರು ಹೇಳಿದರು.

ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನಗಳ ಉದ್ಯೋಗ ನೀಡಲಾಗುತ್ತಿತ್ತು. ಈಗ ಅದನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಈ ಹಿಂದೆ ದಿನಗೂಲಿ ₹125 ಇದ್ದರೆ, ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ₹375ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದವರಿಗೆ ₹42,000 ವರೆಗೆ ಹಣ ಖಾತೆಗೆ ಜಮೆಯಾಗಲಿದೆ ಮತ್ತು ಕೆಲಸ ಮಾಡಿದ ಏಳು ದಿನಗಳೊಳಗೆ ಹಣ ಪಾವತಿಯಾಗುವುದು ಕಡ್ಡಾಯವಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡಿದ ಅವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿದ್ದ ಸುಮಾರು ₹40 ಸಾವಿರ ಕೋಟಿ ರೂಪಾಯಿಯನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ ಎಂದು ಆರೋಪಿಸಿದರು. ಪರಿಶಿಷ್ಟರ ಆರೋಗ್ಯ, ಶಿಕ್ಷಣ, ಉದ್ಯೋಗ, ವಸತಿ ಮತ್ತು ಕುಡಿಯುವ ನೀರಿಗಾಗಿ ಮೀಸಲಾದ ಹಣವನ್ನು ಹಿಂತೆಗೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ, ವಿವಿಜಿ ರಾಮ್ ಕಾಯ್ದೆಯ ಬಗ್ಗೆ ಕಾಂಗ್ರೆಸ್ ಪಕ್ಷ ಸುಳ್ಳು ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು. ದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ವಿಬಿಜಿ ರಾಮ್ ಯೋಜನೆಯೂ ಅದರಲ್ಲಿ ಪ್ರಮುಖವಾಗಿದೆ ಎಂದರು.
ವಿಶ್ವದ ಹಲವು ದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಮಸ್ಯೆ ಎದುರಾಗಿದ್ದರೂ ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ರಾಜ್ಯ ಸರ್ಕಾರ ಎಲ್‌ಪಿಜಿ ಗ್ಯಾಸ್ ಕುರಿತಾಗಿ ಕೃತಕ ಅಭಾವ ಸೃಷ್ಟಿಸಿ ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ತಪ್ಪು ದಾರಿಗೆಳೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಕಾಫಿಬೋರ್ಡ್ ಅಧ್ಯಕ್ಷ ದಿನೇಶ್ ದೇವರುಂದ, ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ದೀಪಕ್ ದೊಡ್ಡಯ್ಯ, ಸುಜಿತ್ ಹಳೇ ಮೂಡಿಗೆರೆ, ಪಂಚಾಕ್ಷರಿ, ಮನೋಜ್ ಹಳೆಕೋಟೆ, ಪ್ರಶಾಂತ, ಧನಿಕ್ ಕೊಡದಿಣ್ಣೆ, ನಯನ ತಳವಾರ,‌ ಪರೀಕ್ಷಿತ್ ಜಾವಳಿ‌, ಕಮಲಮ್ಮ, ತಾರೇಶ್, ರಂಗನಾಥ್, ಸಂದೀಪ್ ಕೆಲ್ಲೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!