ಮೂಡಿಗೆರೆ: ಹೊಸದಾಗಿ ನಿರ್ಮಿಸಿರುವ ನ್ಯಾಯಾಲಯ ಸಂಕೀರ್ಣಕ್ಕೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ 3 ಕಡೆ ಜಾಗವಿದ್ದರೂ ಅದನ್ನು ಗುರುತಿಸದೆ ನನಗೆ ಸೇರಿದ ಕಟ್ಟಡ ತೆರವುಗೊಳಿಸಿ, ನಾನು ನಿರ್ಮಿಸಿರುವ ಬಾವಿಯನ್ನು ಮುಚ್ಚಿ ಹೊಸದಾಗಿ ರಸ್ತೆ ನಿರ್ಮಿಸಲು ಮುಂದಾಗಿರುವ ಅಧಿಕಾರಿಗಳ ಕ್ರಮ ಸರಿಯಲ್ಲ ಎಂದು ಕಟ್ಟಡದ ಮಾಲೀಕ ಅಲ್ತಾಫ್ ಹುಸೇನ್ ದೂರಿದರು.

ಈ ಕುರಿತು ಪಬ್ಲಿಕ್ ಇಂಪ್ಯಾ ಕ್ಟ್ ಜೊತೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಈ ಹಿಂದೆ ಹಳೆಯ ನ್ಯಾಯಾಲಯ ಕಟ್ಟಡದ ಹಿಂಭಾಗದಲ್ಲಿ ಬಿಳಗುಳ ಗ್ರಾಮದ ಸ.ನಂ 5/1 ರಲ್ಲಿ ಜಾಗ ಗುರುತಿಸಿ ಹೊಸ ನ್ಯಾಯಾಲಯ ಕಟ್ಟಡ ನಿರ್ಮಿಸಲಾಗಿದೆ.
ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ತೆರಳಲು ಸಂಪರ್ಕ ರಸ್ತೆ ಬಗ್ಗೆ ಕಟ್ಟಡ ನಿರ್ಮಿಸುವ ಮುನ್ನ ತಲೆಕೆಡಿಸಿಕೊಳ್ಳದ ಅಧಿಕಾರಿಗಳು, ಕಟ್ಟಡ ನಿರ್ಮಾಣವಾದ ಬಳಿಕ ಜಾಗ ಹುಡುಕಲು ಆರಂಭಿಸಿದ್ದಾರೆ. ಇದು ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಾಗಿದೆ.
ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸಲು ಈಗಿನ ನ್ಯಾಯಾಲಯ ಕಟ್ಟಡದ 2 ಬದಿಯಲ್ಲಿ ಕೂಡ ಜಾಗವಿದೆ. ನ್ಯಾಯಾಲಯ ಕಟ್ಟಡದ ಕಾಂಪೌಂಡ್ ನ ಹೊರಭಾಗದ ಒಂದು ಬದಿಯಲ್ಲಿ ಖಾಸಗಿ ಸಂಸ್ಥೆಯವರ ಚಿಕ್ಕ ಕಟ್ಟಡವಿದೆ. ಅದನ್ನು ತೆರೆವುಗೊಳಿಸಿದರೆ ರಸ್ತೆ ನಿರ್ಮಿಸಿಕೊಳ್ಳ ಬಹುದಾಗಿದೆ. ಇನ್ನೊಂದು ಕಡೆ ನ್ಯಾಯಾಲಯ ಕಟ್ಟಡದ ಕಾಂಪೌಂಡ್ ಒಳಭಾಗದಲ್ಲಿ ಬೇಕಾದಷ್ಟು ಜಾಗವಿದೆ. ಅಲ್ಲಿರುವ ಚಿಕ್ಕ ಕಟ್ಟಡವನ್ನು ತೆರವುಗೊಳಿಸಿದರೆ ರಸ್ತೆ ನಿರ್ಮಿಸಲು ಸಾಕಷ್ಟು ಜಾಗವಿದೆ.
ಎರಡು ಕಡೆ ಅಲ್ಲದೆ ಹೊಸ ನ್ಯಾಯಾಲಯ ಕಟ್ಟಡದ ಜಾಗಕ್ಕೆ ತೆರಳಲು ಹೆಸಗಲ್ ಗ್ರಾಪಂ ನೂತನ ಕಚೇರಿ ಬಳಿಯಿರುವ ಸರ್ಕಾರಿ ಬಾವಿಯ ಪಕ್ಕದಲ್ಲಿ ಕಾಂಕ್ರೀಟ್ ರಸ್ತೆಯಿದೆ. ಇದು ಕಂದಾಯ ಇಲಾಖೆಯ ನಕಾಶೆಯಲ್ಲಿ ಸೇರ್ಪಡೆಗೊಂಡಿದೆ. ಈ 3 ಕಡೆ ರಸ್ತೆ ನಿರ್ಮಿಸಲು ಜಾಗವಿದ್ದರೂ ಅಧಿಕಾರಿಗಳು ಗಮನಿಸದೆ ಬೇರೆ ಜಾಗ ಹುಡುಕಿ ರಸ್ತೆ ನಿರ್ಮಿಸಲು ಹೊರಟಿರುವುದು ಸರಿಯಲ್ಲ ಎಂದು ದೂರಿದರು.
ಬಿಳುಗುಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಸ.ನಂ 11/ಎಪಿ ಯಲ್ಲಿ ಒಂದುವರೆ ಗುಂಟೆ ಜಾಗದಲ್ಲಿರುವ 2 ಅಂತಸ್ತಿನ ನನ್ನ ಕಟ್ಟಡದ ಪಕ್ಕದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ 2 ಹಾಸ್ಟೆಲ್ ಕಟ್ಟಡ ಒಂದೆ ಕಾಂಪೌಂಡಿನ ಒಳಗಿದೆ. ಅಲ್ಲಿ ಹಾದು ಹೋಗಿರುವ ಚಿಕ್ಕ ಕಚ್ಚಾರಸ್ತೆ, ಮೈದಾನಕ್ಕೆ ಸಂಪರ್ಕ ಕಲ್ಪಿಸುವ ಕಾಲುದಾರಿಯಾಗಿದೆ. ಈ ಕಾಲುದಾರಿಯಲ್ಲಿ ಹಿಂದೆ ರೈತರು ಜಾನುವಾರುಗಳನ್ನು ಮೇಯಿಸಲು ಮೈದಾನಕ್ಕೆ ಕರೆದೊಯ್ಯುವ ಮಾರ್ಗವಾಗಿತ್ತು. ಇದು ಖಾಸಗಿ ದಾರಿಯಾಗಿದ್ದು, ಈ ದಾರಿಯನ್ನು ಆಧಾರವಾಗಿಟ್ಟುಕೊಂಡು ನನ್ನ ಕಟ್ಟಡವನ್ನು ಮತ್ತು ಪಕ್ಕದ ಇಬ್ಬರ ತೋಟವನ್ನು ತೆರವುಗೊಳಿಸಿ ರಸ್ತೆ ನಿರ್ಮಿಸಲು ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆ.
ನ. 18 ರಂದು ನನ್ನ ಕಟ್ಟಡದ ಪಕ್ಕದಲ್ಲಿರುವ ತೋಟದ ಮಾಲೀಕರಿಬ್ಬರಿಗೆ ಸರ್ವೆ ಅಧಿಕಾರಿ ಮತ್ತು ರಾಜಸ್ವ ನಿರೀಕ್ಷಕರ ಮೊಹರು ಮತ್ತು ಸಹಿಯನ್ನು ಹೊಂದಿರುವ ನೋಟಿಸ್ ನೀಡಲಾಗಿದೆ. 18 ರಂದು ನೋಟಿಸ್ ನೀಡಿ 19 ರಂದು ಸರ್ವೇ ನಡೆಸುವುದಾಗಿ ನೋಟಿಸಿನಲ್ಲಿ ವಿವರಿಸಲಾಗಿದೆ. ಆ ನೋಟಿಸಿನಲ್ಲಿ ನನ್ನ ಹೆಸರಿದೆ. ನೋಟಿಸ್ ನೀಡುವ ಮುನ್ನ ಕಟ್ಟಡ ಮಾಲೀಕರು ಮತ್ತು ಖಾಸಗಿ ತೋಟದ ಮಾಲೀಕರ ಸಭೆ ನಡೆಸಿಲ್ಲ. ಏಕ ಪಕ್ಷಿಯವಾಗಿ ತೀರ್ಮಾನ ತೆಗೆದುಕೊಂಡಿರುವ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು2 ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ಅದನ್ನು ಬಾಡಿಗೆಗೆ ನೀಡಿದ್ದೇನೆ. ಒಂದು ಮನೆಯಲ್ಲಿ ನಾನು ವಾಸವಿದ್ದೇನೆ. ಬಾಡಿಗೆದಾರರಿಂದ ಬರುವ ಮಾಸಿಕ ಆದಾಯದಲ್ಲಿ ಜೀವನ ನಡೆಸುತ್ತಿದ್ದೇನೆ. ಕಟ್ಟಡವನ್ನು ಕೆಡವಿ ರಸ್ತೆ ನಿರ್ಮಿಸಿದರೆ ನನ್ನ ಕುಟುಂಬ ಬೀದಿಗೆ ಬರುತ್ತದೆ ಎಂಬುದನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕಾಗಿದೆ.
ನನ್ನ ಕಟ್ಟಡಕ್ಕೆ ಹೆಸಗಲ್ ಗ್ರಾ.ಪಂನಿಂದ ನೀರಿನ ಸಂಪರ್ಕ ಕಲ್ಪಿಸಿಲ್ಲ. ಅದಕ್ಕಾಗಿ 48 ಅಡಿ ಆಳದ ಬಾವಿಯೊಂದನ್ನು ನಿರ್ಮಿಸಿಕೊಂಡಿದ್ದೇನೆ. ಆ ಬಾವಿಯನ್ನು ಮುಚ್ಚಿದರೆ ನನ್ನ ಕಟ್ಟಡದಲ್ಲಿ ವಾಸವಿರುವ ಕುಟುಂಬದವರಿಗೂ ಮತ್ತು ಪರಿಸರದ ಮನೆಯವರಿಗೂ ಕುಡಿಯಲು ನೀರಿಲ್ಲದೆ ಕಂಗಲಾಗಬೇಕಾಗಿದೆ. ಹಳೆಯ ನ್ಯಾಯಾಲಯ ಕಟ್ಟಡದ ಆವರಣದಲ್ಲಿರುವ ಎರಡು ಕಡೆ ಇರುವ ಜಾಗವನ್ನು ಮತ್ತು ಗ್ರಾಪಂ ಕಟ್ಟಡದ ಪಕ್ಕದಲ್ಲಿರುವ ನಕಾಶೆ ರಸ್ತೆಯನ್ನು ಪರಿಶೀಲಿಸಿ, ಅದರಲ್ಲಿ ಒಂದು ಜಾಗವನ್ನು ಆಯ್ಕೆ ಮಾಡಿಕೊಂಡು ರಸ್ತೆ ನಿರ್ಮಿಸಬೇಕು. ನನ್ನ ಕಟ್ಟಡವನ್ನು ತೆರವುಗೊಳಿಸಲು ನಾನು ಅವಕಾಶ ನೀಡುವುದಿಲ್ಲ. ಅಧಿಕಾರಿಗಳು ಕಟ್ಟಡ ತೆರವುಗೊಳಿಸುವಂತೆ ಬಲವಂತ ಮಾಡಿದರೆ ಅಥವಾ ಒತ್ತಡ ಹೇರಿದರೆ ತಾಲೂಕು ಕಚೇರಿ ಎದುರು ಕುಟುಂಬ ಸಮೇತ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
