ಮೂಡಿಗೆರೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಎಂ. ಜಿ. ರಸ್ತೆ ಹಾಗೂ ಆಜಾದ್ ರಸ್ತೆ ಸಂಪರ್ಕಿಸುವ ಬಳಿ ತಿರುವಿನಲ್ಲಿ ಮಧ್ಯಭಾಗ ಗುಂಡಿ ಬಿದ್ದಿರುವುದರಿಂದ ಸಾರ್ವಜನಿಕರಿಗೆ ಓಡಾಡಲು ಅಡಚಣೆಯಾಗಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಕಾಂಕ್ರಿಟ್ ರಸ್ತೆಗಳನ್ನು ನೀರಿನ ಪೈಪ್ ಹಾಕಲು ಮಾರಣ ಹೋಮ ಮಾಡಿದ್ದೂ ಈಗ ಗುಂಡಿ ಮುಕ್ತ ರಸ್ತೆಗಳಿಗೆ ಹೋರಾಟ ಮಾಡಬೇಕಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ
ಅಧಿಕಾರಕ್ಕೆ ಬಂದ ಹೊಸತರಲ್ಲಿ ಆಡಳಿತ ಮಂಡಳಿ ಪಟ್ಟಣದ ಎಲ್ಲ ರಸ್ತೆಗಳನ್ನು ಮೇಲ್ದರ್ಜೆಗೇರಿಸುತ್ತೇವೆ. ಚರಂಡಿ ಸ್ವಚ್ಛಗೊಳಿಸುತ್ತೇವೆ. ಸಾರ್ವಜನಿಕರ ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತೇವೆ ಎಂದು ಹೇಳಿಕೆಗಳನ್ನೇನೋ ನೀಡಿದರು. ಆದರೆ, ಕಾಲಕ್ರಮೇಣ ಕೊಟ್ಟ ಮಾತು ಮರೆತು ಸಾರ್ವಜನಿಕ ಕಾರ್ಯಗಳತ್ತ ಚಿತ್ತ ಹರಿಸದಿರುವುದು ಮಾತ್ರ ಬೇಸರದ ಸಂಗತಿಯಾಗಿದೆ.
ವಾರ್ಡ್‌ವಾರು ಅಭಿವದ್ಧಿಗೆ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತಲೇ ಇದೆ. ಆದರೆ, ಸಕಾಲಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಾದವರು ಮಾತ್ರ ಅಭಿವದ್ಧಿಯತ್ತ ಅದ್ಯಾಕೋ ಮನಸ್ಸು ಮಾಡುತ್ತಿಲ್ಲ ಎನ್ನುವುದು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಹಲವು ದಿನಗಳಿಂದ ರಸ್ತೆ ಮಧ್ಯೆ ಗುಂಡಿ ಬಿದ್ದು, ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಸುತ್ತಲಿನ ನಿವಾಸಿಗಳು ದೂರಿದ್ದಾರೆ.
ಸಂಬಂಧಿಸಿದ ವಾರ್ಡ್ ಸದಸ್ಯರು ಕೂಡಲೇ ರಸ್ತೆಯಲ್ಲಿ ಬಿದ್ದ ಗುಂಡಿ ದುರಸ್ತಿಗೆ ಮುಂದಾಗಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕಿದೆ. ಎಷ್ಟರ ಮಟ್ಟಿಗೆ ಪ್ರತಿನಿಧಿಗಳು ಜನರ ಅನುಕೂಲಕ್ಕೆ ಸಹಾಯವಾಗುವರೋ ಕಾದು ನೋಡಬೇಕಿದೆ.
ವರದಿ:ಪುನೀತ್ ಕಡಿದಾಳು
9483811948
